
ಕುಮಟಾ: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪ್ರತಿಷ್ಠಿತ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಟ್ಟದ ‘ವಂದೇ ಮಾತರಂ ಗೀತ ಗಾಯನ ಸ್ಪರ್ಧೆ- 2026’ ಅನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ .

ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷರು, ಪ್ರಸಿದ್ಧ ಸ್ತ್ರೀ ರೋಗ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳಾದ ಡಾ. ಜಿ. ಜಿ. ಹೆಗಡೆ ಅವರ ಪರಿಕಲ್ಪನೆಯಲ್ಲಿ ಈ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ವಂದೇ ಮಾತರಂ ಗೀತೆಯು ಯಶಸ್ವಿಯಾಗಿ 150ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಐತಿಹಾಸಿಕ ಸಂದರ್ಭದ ಅಂಗವಾಗಿ, ಇಡೀ ಪೂರ್ಣ ಗೀತೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಮತ್ತು ವ್ಯಾಪಕವಾಗಿ ಪ್ರಚಾರ ಮಾಡುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ಪ್ರತಿಭೆಗಳಿಗೆ ಆಕರ್ಷಕ ನಗದು ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಪ್ರಥಮ ಬಹುಮಾನವಾಗಿ 10,000 ರೂ, ದ್ವಿತೀಯ ಬಹುಮಾನ 6,000 ರೂ. ಹಾಗೂ ತೃತೀಯ ಬಹುಮಾನವಾಗಿ 4,000 ರೂ. ನಿಗದಿಪಡಿಸಲಾಗಿದೆ. ಇದರೊಂದಿಗೆ ಐದು ವಿದ್ಯಾರ್ಥಿಗಳಿಗೆ ತಲಾ ರೂ. 1,000 ಮೊತ್ತದ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗೂ ಡಿಜಿಟಲ್ ಇ-ಪ್ರಮಾಣಪತ್ರ (E-Certificate) ಲಭ್ಯವಿರಲಿದೆ.
ಭಾಗವಹಿಸುವ ವಿಧಾನ
ರಾಜ್ಯದ ಯಾವುದೇ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ತಮ್ಮ ವಂದೇ ಮಾತರಂ ಗೀತ ಗಾಯನದ ವಿಡಿಯೋವನ್ನು ರೆಕಾರ್ಡ್ ಮಾಡಿ, 83108 91368 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ. ವಿಡಿಯೋಗಳನ್ನು ಕಳುಹಿಸಲು ಆಗಸ್ಟ್ 31, 2026 ಕೊನೆಯ ದಿನಾಂಕವಾಗಿರುತ್ತದೆ. ಸ್ಪರ್ಧೆಯ ಮುಖ್ಯ ನಿರ್ಣಾಯಕರಾಗಿ ಗೋಕರ್ಣದ ಸ್ಮಾರ್ತ ಗುರುಕುಲದ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ (ಮೊ: 94825 54730) ಹಾಗೂ ಸಂಯೋಜಕರಾಗಿ ಕುಮಟಾ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಕಿರಣ ಭಟ್ಟ (ಮೊ: 87923 16456) ಕಾರ್ಯನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಕಿರಣ ಭಟ್ಟ, ಉಪಪ್ರಾಚಾರ್ಯರಾದ ರಮ್ಯಾ ಸಭಾಹಿತ್, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಸಂಸ್ಕೃತ ಉಪನ್ಯಾಸಕರಾದ ಗಣಪತಿ ಭಟ್ಟ, ಕನ್ನಡ ಉಪನ್ಯಾಸಕಿ ಪೂಜಾ ಭಟ್ಟ, ಹಿಂದಿ ಉಪನ್ಯಾಸಕಿ ಗಾಯತ್ರಿ ಹೆಗಡೆ ಹಾಗೂ ಆಂಗ್ಲ ಭಾಷಾ ಉಪನ್ಯಾಸಕರಾದ ಲೀನಾ ಕೊನೆಹಳ್ಳಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ವಂದೇ ಮಾತರಂ ಗೀತ ಗಾಯನ ಸ್ಪರ್ಧಾ ನಿಯಮಗಳು
ಮೊದಲ ಹಂತದ ನಿಯಮಗಳು : ಎರಡು ಹಂತಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಮೊದಲಿನ ಹಂತದಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಬೇಕು. ನಂತರ ಅಂತಿಮ ಹಂತಕ್ಕೆ 50 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ 50 ಜನ ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜಿನಲ್ಲಿ ನಡೆಸುವ ಅಂತಿಮ ಹಂತದ ಸ್ಪರ್ಧೆಯಲ್ಲಿ ನೇರವಾಗಿ ನಿರ್ಣಾಯಕರು ಮತ್ತು ಕೇಳುಗರ ಎದುರಿನಲ್ಲಿ ಸ್ಪರ್ಧಿಸಬೇಕಾಗುತ್ತದೆ. ಕರ್ನಾಟಕ ರಾಜ್ಯದ ಪ್ರೌಢಶಾಲೆಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಒಂದು ಪ್ರೌಢಶಾಲೆಯಿಂದ ಎರಡು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಪ್ರೌಢಶಾಲೆಯ ಅತ್ಯುತ್ತಮ ಹಾಡುಗಾರರನ್ನು ಕಳುಹಿಸಲು ಆಯಾ ಪ್ರೌಢಶಾಲೆಯವರು ಗಮನಹರಿಸುವುದು. 3.10 ನಿಮಿಷದಲ್ಲಿ ಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಬೇಕು. ಸಾಹಿತ್ಯ ಶುದ್ಧಿ, ಜ್ಯೋತಿ ಕೃತಿ, ರಾಗದ ಶುದ್ಧಿ, ತಾಳ ಇತ್ಯಾದಿ ಸಂಗೀತಕ್ಕೆ ಸಂಬಂಧಿಸಿದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಹಾಡುವಾಗ ಶೃತಿ ಪೆಟ್ಟಿಗೆಯನ್ನು (Shruti box) ಮಾತ್ರ ಬಳಸಲು ಅವಕಾಶವಿದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿಡಿಯೋ ಚಿತ್ರೀಕರಿಸುವಾಗ ಗಮನಿಸಬೇಕಾದ ಅಂಶಗಳು
ವಿಡಿಯೋ ಲ್ಯಾಂಡ್‌ಸ್ಕೇಪ್ (Landscape) ಸೈಜ್‌ನಲ್ಲಿ ಇರಬೇಕು. ಒಬ್ಬ / ಒಬ್ಬಳು ಒಂದು ವಿಡಿಯೋ ಮಾತ್ರ ಕಳಿಸಬೇಕು. ಯಾವುದೇ ಎಡಿಟಿಂಗ್‌ಗಳಿಗೆ ಅವಕಾಶವಿರುವುದಿಲ್ಲ. ವಿಡಿಯೋದಲ್ಲಿ ಪ್ರೌಢಶಾಲೆಯ ಹೆಸರು, ವಿದ್ಯಾರ್ಥಿಯ ಹೆಸರು ಮತ್ತು ವಿಳಾಸವನ್ನು ತಿಳಿಸಬೇಕು. ವಿಡಿಯೋಗಳನ್ನು ನಮ್ಮ ವಾಟ್ಸಾಪ್ ನಂಬರ್‌ಗೆ ಕಳುಹಿಸುವಾಗ ಯಾವ ಪ್ರೌಢಶಾಲೆಯ ವಿದ್ಯಾರ್ಥಿ ಎಂಬುದನ್ನು ದಾಖಲೆ ಸಮೇತ ಕಳುಹಿಸಬೇಕು. ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ಅವಕಾಶವಿಲ್ಲ. ನಿಮ್ಮ ವಿಡಿಯೋ ದೊರೆತಿರುವುದರ ಕುರಿತು ಮಾಹಿತಿ ಕಳುಹಿಸಲಾಗುವುದು. ನಾವೇ ನಿಮ್ಮ ವಿಡಿಯೋಗಳನ್ನು ನಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ. ವಿಡಿಯೋದ ವೀಕ್ಷಣೆ (Views), ಲೈಕ್ (Like) ಮತ್ತು ಕಾಮೆಂಟ್ (Comment) ಆಧರಿಸಿ ಫಲಿತಾಂಶ ನಿರ್ಧಾರವಾಗುವುದಿಲ್ಲ. ನಿರ್ಣಾಯಕರೇ ವಿಡಿಯೋಗಳನ್ನು ವೀಕ್ಷಿಸಿ ಫಲಿತಾಂಶ ನೀಡುತ್ತಾರೆ. ಅಂತಿಮ ಹಂತದಲ್ಲಿ ನೇರವಾಗಿಯೇ ಸ್ಪರ್ಧೆ ಜರುಗುತ್ತದೆ. ನಕಾರಾತ್ಮಕ ತಂತ್ರಗಳಿಗೆ ಅವಕಾಶವಿರುವುದಿಲ್ಲ. ಅಂತಿಮ ಹಂತಕ್ಕೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ನಿಯಮಗಳು ನಿರ್ಣಾಯಕರ ಸಮ್ಮುಖದಲ್ಲಿ ಹಾಡಬೇಕು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಅಂತಿಮ ಸ್ಪರ್ಧೆಯ ದಿನಾಂಕ ಮತ್ತು ಸ್ಥಳ: 09/09/2026, ಬುಧವಾರಸ್ಥಳ: ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು, ಗೋರೆ, ಕುಮಟಾಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9663119845, 8792316456 , 9449477473, 9986558703









Leave a Reply