ಕಾರವಾರ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ, ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ವತಿಯಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, “ಮೇ 26, 2024 ರಂದು ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿರುವ ಆರು ಪುಟಗಳ ಡೆತ್ ನೋಟ್ನಲ್ಲಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ವಿವಿಧ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಯಾವೆಲ್ಲಾ ಅಕೌಂಟ್ಗಳಿಗೆ ಹಣ ಹೋಗಿದೆ ಮತ್ತು ಬಳ್ಳಾರಿ ಚುನಾವಣೆಗೆ 20 ಕೋಟಿ ರೂಪಾಯಿ ವ್ಯಯವಾಗಿರುವ ಬಗ್ಗೆಯೂ ಸಂಪೂರ್ಣ ಮಾಹಿತಿ ಅದಲ್ಲಿದೆ. ಬ್ಯಾಂಕ್ ಅಕೌಂಟ್ಗಳ ಮೂಲಕವೇ ಈ ಎಲ್ಲಾ ಅವ್ಯವಹಾರಗಳು ನಡೆದಿರುವುದರಿಂದ ತನಿಖಾ ಸಂಸ್ಥೆಗಳು ಕೇವಲ ಮೂರು ದಿನಗಳಲ್ಲಿ ಈ ಹಗರಣವನ್ನು ಭೇದಿಸಬಹುದಾಗಿದೆ” ಎಂದು ಹೇಳಿದರು. ಬಡ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಬರೋಬ್ಬರಿ 170 ಕೋಟಿ ರೂಪಾಯಿ ಹಣವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಬೇಕು. ಇಂತಹ ಭ್ರಷ್ಟರಿಗೆ ಸಚಿವ ಸ್ಥಾನ ನೀಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರು ಎಸಳೆ, ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯಕ್, ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೆರ್, ಶಿರಸಿ ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ಸಿದ್ದಾಪುರ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಾಯ್ಸನ್ ಡಿಸೋಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ್ ಹಾಗೂ ಪ್ರಮುಖರಾದ ರಾಜು ಭಂಡಾರಿ, ಸುರೇಶ್ ನಾಯಕ್, ಬಸಣ್ಣ ಕುರುಬಕಟ್ಟಿ, ರಾಮಣ್ಣ ಚಿಕ್ಯಾನ ಮನೆ, ನಾಗರಾಜ್ ನಾಯ್ಕ್ ಶಿರಸಿ, ಮಾರುತಿ ನಾಯ್ಕ್ ಕಾನಗೋಡ, ನಾಗರಾಜ್ ನಾಯ್ಕ್ ಬೆಡಕಣಿ, ಪ್ರಸನ್ನ ಹೆಗಡೆ, ತೋಟಪ್ಪ ನಾಯ್ಕ, ಮಹಾಂತೇಶ ಹಾದಿಮನಿ ಸೇರಿದಂತೆ ಕಿಶನ್ ಕಾಂಬ್ಳೆ, ನಾಗೇಶ್ ಕುರ್ಡೇಕರ್ ಹಾಗೂ ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.












Leave a Reply