ಕೆಲವು ಸಂಬಂಧಗಳಿಗೆ ಹೆಸರಿಡಲಾಗದು.ಕೆಲವು ನಿಷ್ಠೆಗಳಿಗೆ ಅಳತೆ ಹಾಕಲಾಗದು.ಕೆಲವು ಬದುಕುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದಿದ್ದರೂ, ಇತಿಹಾಸ ಕಟ್ಟಿದವರ ಹೆಜ್ಜೆ ಗುರುತುಗಳ ಜೊತೆ ಬೆರೆತು ಹೋಗಿರುತ್ತವೆ.
ರಾಮಕೃಷ್ಣ ಹೆಗಡೆ-ಈಶ್ವರ ಹೆಗಡೆ ಎಂಬುದು ಅಂತಹ ಒಂದು ಅಪೂರ್ವ ಬಂಧ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಎಂಬ ಪುಟ್ಟ ಹಳ್ಳಿಯ ಮಣ್ಣಿನಲ್ಲಿ ಹುಟ್ಟಿದ ರಾಮಕೃಷ್ಣ ಹೆಗಡೆ, ಮುಂದೆ ಕರ್ನಾಟಕದ ರಾಜಕಾರಣದ ದಿಕ್ಕನ್ನೇ ಬದಲಿಸಿದ ನಾಯಕನಾಗಿ ಬೆಳೆದವರು. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಸೆರೆವಾಸ ಅನುಭವಿಸಿ, ಹೋರಾಟದ ಬೆಂಕಿಯಲ್ಲಿ ಪಕ್ವಗೊಂಡು, ಜನತಂತ್ರದ ಮೌಲ್ಯಗಳಿಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡು ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮಿದವರು.
ಆ ಮಹಾನ್ ನಾಯಕನ ಸುತ್ತಲೂ ಹಲವರು ಇದ್ದರು.ಆದರೆ ಕೆಲವರು ಮಾತ್ರ ನಾಯಕನ ನೆರಳಲ್ಲ; ನಾಯಕನ ನಂಬಿಕೆಯೊಳಗೆ ಬದುಕುತ್ತಾರೆ.
ಅಂತಹವರಲ್ಲಿ ಈಶ್ವರ ಹೆಗಡೆ ಗೋಳಿಕಟ್ಟಾ ಒಬ್ಬರು.
ದೇವಿಸರದ ಜಾನಕಿಯ ಗರ್ಭದಲ್ಲಿ ಜನಿಸಿದ ಈಶ್ವರ ಹೆಗಡೆ, ರಾಮಕೃಷ್ಣ ಹೆಗಡೆಯವರ ಅನುಯಾಯಿಯಾಗಿ ಅವರ ಗರಡಿಗೆ ಬಂದವರು. ಬಂದದ್ದು ಕೇವಲ ರಾಜಕೀಯ ಕಲಿಯಲು ಅಲ್ಲ; ಒಬ್ಬ ನಾಯಕನನ್ನು ಅರ್ಥಮಾಡಿಕೊಳ್ಳಲು. ಒಂದು ಸಿದ್ಧಾಂತವನ್ನು ಬದುಕಾಗಿಸಿಕೊಳ್ಳಲು. ಒಂದು ಜವಾಬ್ದಾರಿಯನ್ನು ನಿಷ್ಠೆಯಿಂದ ಹೊತ್ತು ಸಾಗಲು.
ಹೆಗಡೆಯವರು ನೀಡಿದ ಕೆಲಸ ಸಣ್ಣದೋ ದೊಡ್ಡದೋ ಎಂದು ಅವರು ಎಂದಿಗೂ ಅಳೆಯಲಿಲ್ಲ.ಕೊಟ್ಟ ಜವಾಬ್ದಾರಿ ಎಂದರೆ ಅದು ಕರ್ತವ್ಯ; ಕರ್ತವ್ಯ ಎಂದರೆ ಅದನ್ನು ಅಚ್ಚುಕಟ್ಟಾಗಿ ಮಾಡಲೇಬೇಕು.ಇದು ಈಶ್ವರ ಹೆಗಡೆಯ ಬದುಕಿನ ಸರಳ ಸೂತ್ರ.
ಹೀಗೆ ಜವಾಬ್ದಾರಿಗಳನ್ನು ನಿರ್ವಹಿಸುತ್ತ, ನಿಧಾನವಾಗಿ ಹೆಗಡೆಯವರ ನಂಬಿಕೆಗೆ ಪಾತ್ರರಾದರು. ಅನುಯಾಯಿಯಿಂದ ಆತ್ಮೀಯನಾಗಿ, ಕಾರ್ಯಕರ್ತನಿಂದ ನಿಕಟವರ್ತಿಯಾಗಿ ಬೆಳೆದರು. ಅವರ ನಿಷ್ಠೆ ಮಾತಿನಲ್ಲಿ ಇರಲಿಲ್ಲ; ಅದು ಅವರ ನಡೆ-ನುಡಿಯಲ್ಲಿ ಕಾಣಿಸುತ್ತಿತ್ತು.
ರಾಮಕೃಷ್ಣ ಹೆಗಡೆ ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ. ಅವರು ಒಂದು ಚಿಂತನೆ. ಒಂದು ಕನಸು. ಅಧಿಕಾರವನ್ನು ಬೆಂಗಳೂರಿನ ಗೋಡೆಗಳೊಳಗೆ ಸೀಮಿತಗೊಳಿಸದೆ, ಹಳ್ಳಿಯ ಕಟ್ಟಕಡೆಯ ಮನೆ ಬಾಗಿಲಿಗೂ ತಲುಪಿಸಬೇಕು ಎಂಬ ದೂರದೃಷ್ಟಿ ಅವರದು.
ವಿಕೇಂದ್ರೀಕರಣ, ಗ್ರಾಮೀಣಾಭಿವೃದ್ಧಿ ಅಧಿಕಾರದ ವಿಕೇಂದ್ರೀಕರಣ, ಇವು ಹೆಗಡೆಯ ಆಡಳಿತದ ಪದಗಳಷ್ಟೇ ಆಗಿರಲಿಲ್ಲ. ಜನರ ಬದುಕು ಬದಲಾಗಬೇಕು ಎಂಬ ಅವರ ಕನಸಿನ ಭಾಷೆಯಾಗಿತ್ತು. ಆ ಕನಸನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಪಯಣದಲ್ಲಿ ಈಶ್ವರ ಹೆಗಡೆಯ ಹೆಜ್ಜೆಗಳೂ ಇದ್ದವು. ಹಳ್ಳಿಯ ಜನರ ನಡುವೆ ಬೆರೆತು, ಕಾರ್ಯಕರ್ತರ ಕಷ್ಟ ಕೇಳಿ, ತಮ್ಮನ್ನು ನಂಬಿ ಬಂದವರ ಕೈ ಹಿಡಿದು ನಡೆಸಿದ ಅವರು, ರಾಜಕೀಯವನ್ನು ಅಧಿಕಾರದ ಮೆಟ್ಟಿಲಾಗಿ ನೋಡಲಿಲ್ಲ. ಜನರ ಬಳಿಗೆ ಹೋಗುವ ದಾರಿಯಾಗಿ ಕಂಡರು. ಅವರ ಬಳಿಗೆ ಬಂದವರಿಗೆ ಅವರು ಕೇವಲ ನಾಯಕನಲ್ಲ; ಆಸರೆಯಾಗಿದ್ದರು.
ಕಷ್ಟ ಹೇಳಿಕೊಂಡು ಬಂದವನನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂಬ ಮನಸ್ಸು.ತಮ್ಮವರ ನೋವನ್ನು ತಮ್ಮ ನೋವಿನಂತೆ ಕಾಣುವ ಹೃದಯ.ಪಕ್ಷದ ಕಾರ್ಯಕರ್ತನನ್ನು ಕೇವಲ ಕಾರ್ಯಕರ್ತನಾಗಿ ನೋಡದೆ, ಮನೆಯವನಂತೆ ಕಾಣುವ ಆತ್ಮೀಯತೆ ಈಶ್ವರ ಹೆಗಡೆ ಅವರದ್ದಾಗಿದ್ದತ್ತು.
ಹೆಗಡೆ ಎಂಬ ಹೆಸರು ಕೇಳಿದರೆ ಅವರ ಮನಸ್ಸು ಎಚ್ಚರವಾಗುತ್ತಿತ್ತು ಎನ್ನುವುದು ಅತಿಶಯೋಕ್ತಿಯಲ್ಲ. ನಿದ್ದೆಯಲ್ಲಿಯೂ ಎಚ್ಚರಗೊಳ್ಳುವಷ್ಟು ನಿಷ್ಠೆ. ಜನತಾ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದ ದಿನಗಳು ಅವರ ರಾಜಕೀಯ ಬದುಕಿನ ಹೆಮ್ಮೆಯ ಅಧ್ಯಾಯ. ಅದು ಅಧಿಕಾರದ ರಾಜಕಾರಣವಲ್ಲ.ಅದು ನಂಬಿಕೆಯ ರಾಜಕಾರಣ. ನಾಯಕನ ಮೇಲೆ ನಂಬಿಕೆ.ಸಿದ್ಧಾಂತದ ಮೇಲೆ ನಂಬಿಕೆ.ಕಾರ್ಯಕರ್ತರ ಮೇಲೆ ನಂಬಿಕೆ.ಜನರ ಮೇಲೆ ನಂಬಿಕೆ. ರಾಮಕೃಷ್ಣ ಹೆಗಡೆಯವರ ರಾಜಕೀಯ ಪಯಣದಲ್ಲಿ ಅನೇಕ ಹೆಸರುಗಳು ಬಂದವು, ಹೋದವು. ಆದರೆ ಕೆಲವು ಹೆಸರುಗಳು ಮಾತ್ರ ಅವರ ಪಯಣದೊಂದಿಗೆ ಶಾಶ್ವತವಾಗಿ ಬೆಸೆದುಕೊಂಡವು. ಅವುಗಳಲ್ಲಿ ಈಶ್ವರ ಹೆಗಡೆ ಎಂಬ ಹೆಸರು ವಿಶೇಷ.
ಮಂಜುನಾಥ ಈರಗೊಪ್ಪ





Leave a Reply