ರೌಡಿ ಇಸಂಗೆ ಕಾರವಾರದಲ್ಲಿ ಲಾಕ್‌ಡೌನ್: ಹೊಸಪೇಟೆಯಲ್ಲಿ ಹೊಸ ಬ್ರಾಂಚ್ ಓಪನ್!

ಹಂಚಿಕೊಳ್ಳಿ

ಕಾರವಾರ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶಿಟರ್ ಪ್ರಶಾಂತ್ ದತ್ತಾರಾಮ ಗೋವೇಕರ್ (೩೭ ವರ್ಷ, ನಿವಾಸಿ: ಸಿದ್ದಾವಾಡ, ಕಿನ್ನರ) ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಆರೋಪಿ ಪ್ರಶಾಂತ್ ಗೋವೇಕರ್ ವಿರುದ್ಧ ಕಾರವಾರ ಗ್ರಾಮೀಣ ಠಾಣೆ, ಕಾರವಾರ ನಗರ ಠಾಣೆ, ಮಹಿಳಾ ಪೊಲೀಸ್ ಠಾಣೆ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗಳಲ್ಲಿ ಒಟ್ಟು ೧೨ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ವ್ಯಕ್ತಿ ಮೇಲಿನ ಹಲ್ಲೆಗೆ ಸಂಬಂಧಿಸಿದ ೪ ಪ್ರಕರಣಗಳು, ಮಾನಹಾನಿಗೆ ಸಂಬಂಧಿಸಿದ ೧ ಪ್ರಕರಣ, ಜೀವ ಬೆದರಿಕೆಯ ೪ ಪ್ರಕರಣಗಳು, ಸರ್ಕಾರಿ ನೌಕರರ ಮೇಲೆ ಹಲ್ಲೆಯ ೨ ಪ್ರಕರಣಗಳು ಹಾಗೂ ದರೋಡೆಗೆ ಸಂಬಂಧಿಸಿದ ೧ ಪ್ರಕರಣ ಸಹ ಸೇರಿವೆ.

ಆರೋಪಿಯು ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಾಕ್ಷಿದಾರರನ್ನು ಹೆದರಿಸುವುದು ಮತ್ತು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆಯನ್ನು ಗಮನಿಸಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ನಿರೀಕ್ಷಕರು ಗಡಿಪಾರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರು, ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ರ ಕಲಂ ೫೫(ಎ) ಮತ್ತು ೫೫(ಬಿ) ಅಡಿಯಲ್ಲಿ ಆರೋಪಿಯನ್ನು ದಿನಾಂಕ ೧೧-೦೮-೨೦೨೬ ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. ಈ ಆದೇಶದನ್ವಯ ಕಾರವಾರ ಗ್ರಾಮೀಣ ಪೊಲೀಸ್ ಸಿಬ್ಬಂದಿಯವರು ಆರೋಪಿಯನ್ನು ದಿನಾಂಕ 13-08-2026 ರಂದು ಹೊಸಪೇಟೆ ನಗರ ಪೊಲೀಸ್ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಇಂತಹ ಕಠಿಣ ಕ್ರಮಗಳನ್ನು ಮುಂದುವರಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *