ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ಬಾಲು ನಾಯಕ್ ಸಹೋದರನ ಮೇಲೆ ಗುಂಡಿನ ದಾಳಿ

ಹಂಚಿಕೊಳ್ಳಿ

ಪಣಜಿ: ಗೋವಾದ ಪ್ರಸಿದ್ಧ ‘ಕ್ಯಾಸಿನ ಪ್ರೈಡ್’ ಮತ್ತು ‘ಮೆಜೆಸ್ಟಿಕ್’ ಗ್ರೂಪ್ ಸಂಸ್ಥೆಗಳ ನಿರ್ದೇಶಕ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶ್ರೀನಿವಾಸ್ ನಾಯಕ್ ಅವರ ಮೇಲೆ ಶುಕ್ರವಾರ ರಾತ್ರಿ ಭೀಕರ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಶ್ರೀನಿವಾಸ್ ನಾಯಕ್ ಹಾಗೂ ಅವರ ಭದ್ರತಾ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಘಟನೆಯ ವಿವರ:
ಗೋವಾದ ರಾಜಧಾನಿ ಪಣಜಿ ಸಮೀಪದ ಪರ್ವರಿಯಲ್ಲಿರುವ ‘ಮೆಜೆಸ್ಟಿಕ್ ಹೋಟೆಲ್’ ಎದುರು ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ಶ್ರೀನಿವಾಸ್ ನಾಯಕ್ ಅವರು ಹೋಟೆಲ್‌ನಲ್ಲಿದ್ದ ತಮ್ಮ ಕಚೇರಿಯ ಕೆಲಸ ಮುಗಿಸಿ ಮನೆಗೆ ತೆರಳಲು ಹೊರಬಂದು, ಕಾರು ಹತ್ತಲು ಹೋದ ಸಮಯದಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ. ಅವರಿಗಾಗಿ ಹೊಂಚು ಹಾಕಿ ಕಾದು ಕುಳಿತಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಭೀಕರವಾಗಿ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿ ನಡೆಯುತ್ತಿದ್ದಂತೆ ಎಚ್ಚೆತ್ತ ಶ್ರೀನಿವಾಸ್ ನಾಯಕ್ ಅವರು ತಕ್ಷಣವೇ ಹೋಟೆಲ್ ಒಳಗಡೆ ಓಡಿ ಜೀವ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಗಾಬರಿಗೊಂಡ ದಾಳಿಕೋರರು ಹೈವೇ ದಾಟಿ ಅಲ್ಲಿಂದ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:
ಹೋಟೆಲ್ ಆವರಣದಲ್ಲಿ ನಡೆದ ಈ ಇಡೀ ಭೀಕರ ಘಟನೆಯ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಉತ್ತರ ಗೋವಾ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (Forensic) ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ಬಿದ್ದಿದ್ದ ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ತನಿಖೆ ಚುರುಕು:
ಘಟನೆಗೆ ಸಂಬಂಧಿಸಿದಂತೆ ಪರ್ವರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ (Attempt to Murder) ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಮೂರ್ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಇವರು ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ್ ಅವರ ಹಿರಿಯ ಸಹೋದರರು ಎನ್ನಲಾನಾಗಿದೆ. ಬಾಲಕೃಷ್ಣ ನಾಯಕ್ ಹಾಗೂ ಶ್ರೀನಿವಾಸ ನಾಯಕ ಯಲ್ಲಾಪುರದ ಬಡವರಿಗೆ ಹಾಗೂ ಅಶಕ್ತರಿಗೆ ಅಪಾರ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿದ್ದನ್ನು ಇಲ್ಲಿ ನೆನೆಯಬಹುದು. ಇಬ್ಬರಿಗೂ ಸೂಕ್ತ ಭದ್ರತೆ ಕಲ್ಪಿಸುವಲ್ಲಿ  ಸರ್ಕಾರ ಗಮನಹರಿಸಬೇಕಿದೆ.

Leave a Reply

Your email address will not be published. Required fields are marked *