ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯೊಂದರಲ್ಲಿ, ನೂತನವಾಗಿ ಸಚಿವ ಸಂಪುಟ ಸೇರಿದ ಅಥಣಿ ಕ್ಷೇತ್ರದ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸವದಿ ಅವರಿಗೆ, ಕರಾವಳಿ ಮತ್ತು ಮಲೆನಾಡು ಭಾಗದ ಭೌಗೋಳಿಕ ಹಾಗೂ ರಾಜಕೀಯ ಸವಾಲುಗಳಿರುವ ಈ ಪ್ರಮುಖ ಜಿಲ್ಲೆಯ ಉಸ್ತುವಾರಿಯನ್ನು ಹಂಚಿಕೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಖಾದರ್ ಹೆಗಲಿಂದ ಸವದಿ ಹೆಗಲಿಗೆ ಜವಾಬ್ದಾರಿ ವರ್ಗಾವಣೆ
ಈ ಹಿಂದೆ ಸಚಿವ ಸಂಪುಟ ವಿಸ್ತರಣೆ ಬಾಕಿ ಇದ್ದ ಹಿನ್ನೆಲೆಯಲ್ಲಿ, ಕರಾವಳಿ ಭಾಗದಲ್ಲಿ ಉದ್ಭವಿಸಿದ್ದ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಿರಿಯ ಸಚಿವ ಯು.ಟಿ. ಖಾದರ್ ಅವರಿಗೆ ತಾತ್ಕಾಲಿಕವಾಗಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ, ಆಗಸ್ಟ್ 3ರಂದು ನಡೆದ ಸಚಿವ ಸಂಪುಟ ವಿಸ್ತರಣೆ ಮುಕ್ತಾಯಗೊಂಡ ಬೆನ್ನಲ್ಲೇ, ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ಮುಖ್ಯಮಂತ್ರಿಯವರು ಉತ್ತರ ಕನ್ನಡದ ಜವಾಬ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಲಕ್ಷ್ಮಣ ಸವದಿ ಅವರಿಗೆ ಹಸ್ತಾಂತರಿಸಿದ್ದಾರೆ.
ಅತಿವೃಷ್ಟಿ ಮತ್ತು ಬರ ಪರಿಸ್ಥಿತಿಯ ತುರ್ತು ಸವಾಲು
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿವೃಷ್ಟಿ ಹಾಗೂ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪದ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ನೂತನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಸವದಿ ಅವರಿಗೆ ತಕ್ಷಣವೇ ಈ ಕೆಳಗಿನ ಜವಾಬ್ದಾರಿಗಳನ್ನು ಸಿಎಂ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ:
- ಸ್ಥಳೀಯ ಪ್ರವಾಸ ಹಾಗೂ ಪರಿಶೀಲನೆ: ಸಚಿವರು ತಕ್ಷಣವೇ ಜಿಲ್ಲೆಗೆ ಭೇಟಿ ನೀಡಿ ತಳಮಟ್ಟದ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
- ಅಧಿಕಾರಿಗಳೊಂದಿಗೆ ಸಮನ್ವಯ: ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಪ್ರವಾಹ ನಿರ್ವಹಣೆ ಮಾಡುವುದು.
- ವಿಳಂಬ ರಹಿತ ಪರಿಹಾರ: ಸಂತ್ರಸ್ತ ಜನರಿಗೆ ಸರ್ಕಾರದ ಪರಿಹಾರ ಕ್ರಮಗಳು ಯಾವುದೇ ವಿಳಂಬವಿಲ್ಲದೆ ತಲುಪುವಂತೆ ನೋಡಿಕೊಳ್ಳುವುದು.
ರಾಜಕೀಯ ಲೆಕ್ಕಾಚಾರ ಮತ್ತು ಮಹತ್ವವೇನು??
ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್.ವಿ. ದೇಶಪಾಂಡೆ ಮತ್ತು ಮಂಕಾಳ ವೈದ್ಯ ಅವರಂತಹ ಪ್ರಭಾವಿ ಕಾಂಗ್ರೆಸ್ ನಾಯಕರಿದ್ದರೂ, ಬೆಳಗಾವಿ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರಭಾವಿ ಸಾರಥಿ ಲಕ್ಷ್ಮಣ ಸವದಿ ಅವರಿಗೆ ಈ ಜಿಲ್ಲೆಯ ಹೊಣೆ ನೀಡಿರುವುದು ಅತ್ಯಂತ ಆಯಕಟ್ಟಿನ ನಡೆಯಾಗಿದೆ. ಜಿಲ್ಲೆಯ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಲು ಹಾಗೂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸವದಿ ಅವರ ಸುದೀರ್ಘ ಆಡಳಿತಾತ್ಮಕ ಅನುಭವ (ಮಾಜಿ ಉಪಮುಖ್ಯಮಂತ್ರಿ) ನೆರವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ.
ಕರಾವಳಿ ಮತ್ತು ಮಲೆನಾಡು ಹಾಗೂ ಅರೆ ಬಯಲುಸೀಮೆ ಯ ಹವಾಮಾನ ವೈಪರೀತ್ಯದ ತುರ್ತು ಪರಿಸ್ಥಿತಿ ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳ ನಡುವೆ ಹೊಸ ಸಾರಥಿ ಲಕ್ಷ್ಮಣ ಸವದಿ ಅವರು ಉತ್ತರ ಕನ್ನಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಕರಾವಳಿ ಜನತೆ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.
ಬ್ಲೂಫಿಲ್ಮ್ ಆರೋಪ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತಾ????
ಮೊಬೈಲ್ ಡಿಸ್ಪ್ಲೇಯಿಂದ ಪ್ರಕೃತಿಯ ಡಿಸ್ಪ್ಲೇಗೆ ಶಿಫ್ಟ್!
2012 ರಂದು ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅಂದು “ರೇಡಾರ್ ಹಕ್ಕಿ”ಗಳಂತೆ ಮಾಧ್ಯಮಗಳ ಕ್ಯಾಮೆರಾಗಳು ವಿಧಾನಸಭೆಯ ಗ್ಯಾಲರಿಯಿಂದ ಜೂಮ್ ಮಾಡಿದಾಗ, ಸವದಿ ಅವರು ಮೊಬೈಲ್ನಲ್ಲಿ ಅತ್ಯಂತ ‘ಏಕಾಗ್ರತೆ’ಯಿಂದ ಏನನ್ನೋ ವೀಕ್ಷಿಸುತ್ತಿದ್ದರು. ಆ ವಿಡಿಯೋ ಹಗರಣದ ಚಳಿ ಇನ್ನು ಜನರಿಗೆ ಬಿಟ್ಟಿಲ್ಲ. ಆಗ ಅವರು ಕೊಟ್ಟಿದ್ದ ಸಬೂಬು ನೆನಪಿದೆಯೇ? “ನಾವು ಬ್ಲೂ ಫಿಲ್ಮ್ ನೋಡ್ತಿರಲಿಲ್ಲ, ವಿದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಹೇಗಿರುತ್ತೆ ಅಂತ ಜನರಲ್ ನಾಲೆಡ್ಜ್ಗಾಗಿ ಸ್ಟಡಿ ಮಾಡ್ತಿದ್ವಿ!” ಎಂದು ಇಡೀ ಜಗತ್ತೇ ನಗುವಂತೆ ಸಮರ್ಥಿಸಿಕೊಂಡಿದ್ದರು!
ಅದರ ಪರಿಣಾಮವಾಗಿ ಈ ಹಗರಣ ಭಾರಿ ಸದ್ದು ಮಾಡಿತ್ತು. ಅಂದಿನ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದರು. “ಸದನಕ್ಕೆ ತನ್ನದೇ ಆದ ಪವಿತ್ರತೆ ಇದೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಶ್ಲೀಲ ವಿಡಿಯೋ ನೋಡುವುದು ಇಡೀ ರಾಜ್ಯಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ” ಎಂದು ಕಿಡಿಕಾರಿದ್ದರು. ಅಲ್ಲದೆ, ಸಚಿವರುಗಳನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು. ವಿಧಾನ ಪರಿಷತ್ತಿನ ಅಂದಿನ ಪ್ರತಿಪಕ್ಷ ನಾಯಕಿ ಮೋಟಮ್ಮ ಅವರು ಸಚಿವರ ನಡವಳಿಕೆಯನ್ನು “ಅಸಹ್ಯ ಮತ್ತು ನಾಚಿಕೆಗೇಡು” ಎಂದು ಕರೆದಿದ್ದರು
ಕಾರಣ, ಅಂದಿನ ಸಿಎಂ ಸದಾನಂದ ಗೌಡ ಅವರ ಸೂಚನೆ ಮೇರೆಗೆ ಲಕ್ಷ್ಮಣ ಸವದಿ ಸೇರಿದಂತೆ ಮೂವರು ಸಚಿವರು (ಸಿ.ಸಿ. ಪಾಟೀಲ್ ಮತ್ತು ಕೃಷ್ಣ ಪಾಲೆಮಾರ್) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಈಗ ಅದೇ ‘ಅಪಾರ ವೀಕ್ಷಣಾ ಅನುಭವ’ ಮತ್ತು ‘ಸಂಶೋಧನಾ ಮನೋಭಾವ’ವನ್ನು ಗುರುತಿಸಿರುವ ಹೈಕಮಾಂಡ್, ಅವರಿಗೆ ಉತ್ತರ ಕನ್ನಡ ಜಿಲ್ಲೆಯನ್ನು ವೀಕ್ಷಿಸುವ ಹೊಣೆ ಕೊಟ್ಟಿದೆ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ.











Leave a Reply