ನವದೆಹಲಿ: ದೇಶೀಯ ಅಡಿಕೆ ಮಾರುಕಟ್ಟೆ ಎದುರಿಸುತ್ತಿರುವ ಗಂಭೀರ ಸವಾಲುಗಳು ಹಾಗೂ ಸಹಕಾರ ಸಂಸ್ಥೆಗಳ ಹಿತರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ನಾಯಕರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಶುಕ್ರವಾರ ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ರಾಜ್ಯದ ಸಂಸದರು, ಕ್ಯಾಂಪ್ಕೋ (CAMPCO) ಹಾಗೂ ಅಡಿಕೆ ಮಹಾಮಂಡಳದ ಪ್ರತಿನಿಧಿಗಳ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿತು.
ಬೆಲೆ ಕುಸಿತಕ್ಕೆ ಕಾರಣವಾದ ಅಕ್ರಮ ಆಮದು: ಗೃಹ ಸಚಿವರಿಗೆ ತಡೆಯಲು ಆಗ್ರಹ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯಲ್ಲಿ ನಿಯೋಗವು ಅಕ್ರಮ ಅಡಿಕೆ ಆಮದಿನಿಂದ ಮಾರುಕಟ್ಟೆಯ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿತು. ಕನಿಷ್ಠ ಆಮದು ಬೆಲೆ (MIP) ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಸುಂಕವಿಲ್ಲದೆ ದೇಶದೊಳಗೆ ಅಕ್ರಮವಾಗಿ ಕಡಿಮೆ ಮೌಲ್ಯದ ಅಡಿಕೆ ಸರಬರಾಜಾಗುತ್ತಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ತೀವ್ರವಾಗಿ ಕುಸಿಯುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕೆಂದು ನಿಯೋಗ ಒತ್ತಾಯಿಸಿತು.
ಇದರೊಂದಿಗೆ, ‘ಒಂದು ದೇಶ, ಒಂದು ತೆರಿಗೆ’ ನಿಯಮದಡಿಯೂ ಸಹಕಾರ ಸಂಸ್ಥೆಗಳ ಮೇಲೆ ಹೇರಲಾಗಿರುವ ಹೆಚ್ಚುವರಿ ಸ್ಥಳೀಯ ತೆರಿಗೆಯ ಹೊರೆಯನ್ನು ತೆಗೆದುಹಾಕಬೇಕು. ಆ ಮೂಲಕ ಖಾಸಗಿ ವ್ಯಾಪಾರಿಗಳೊಂದಿಗೆ ಮುಕ್ತ ಹಾಗೂ ಸಮಾನ ಪೈಪೋಟಿ ನಡೆಸಲು ಸಹಕಾರ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು. ನಿಯೋಗದ ಅಹವಾಲು ಆಲಿಸಿದ ಅಮಿತ್ ಶಾ ಅವರು, ಈ ಕುರಿತು ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮೈಲುತುತ್ತ ಮೇಲಿನ ಜಿಎಸ್‌ಟಿ ಇಳಿಕೆಗೆ ಹಣಕಾಸು ಸಚಿವರಿಗೆ ಮನವಿ
ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗವು, ಅಡಿಕೆ ತೋಟಗಳಿಗೆ ಅತ್ಯಗತ್ಯವಾಗಿರುವ ಶಿಲೀಂಧ್ರನಾಶಕ ‘ಕಾಪರ್ ಸಲ್ಫೇಟ್’ (ಮೈಲುತುತ್ತ) ಮೇಲಿನ ಜಿಎಸ್‌ಟಿ ದರವನ್ನು ಹಾಲಿ ಇರುವ ಶೇಕಡಾ 18ರಿಂದ ಶೇಕಡಾ 5ಕ್ಕೆ ಇಳಿಸುವಂತೆ ಪ್ರಮುಖ ಬೇಡಿಕೆ ಇಟ್ಟಿತು. ಇದು ರೈತರ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ನೆರವಾಗಲಿದೆ ಎಂದು ನಿಯೋಗ ಪ್ರತಿಪಾದಿಸಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಣಕಾಸು ಸಚಿವರು, ಅಕ್ರಮ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಯಲು ದೇಶದ ವಿವಿಧ ಬಂದರುಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಮತ್ತು ಜಾಗರೂಕತೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿಯೋಗದಲ್ಲಿದ್ದ ಪ್ರಮುಖರು
ಈ ಮಹತ್ವದ ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ. ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅರಗ ಜ್ಞಾನೇಂದ್ರ, ಅಡಿಕೆ ಮಹಾಮಂಡಳದ ಅಧ್ಯಕ್ಷರು, ಕ್ಯಾಂಪ್ಕೋ ಅಧ್ಯಕ್ಷರಾದ ಎಸ್. ಆರ್. ಸತೀಶ್‌ಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.












Leave a Reply