ದಾಂಡೇಲಿ:
ನಗರದ ಜಿ.ಎನ್. ರಸ್ತೆಯ ಹನುಮಾನ್ ಬಾರ್ ಬಳಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿ ತಲೆಮರೆಸಿಕೊಂಡಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ದಾಂಡೇಲಿ ನಗರ ಠಾಣೆಯ ಪೊಲೀಸರು ಕೇವಲ 24 ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತರ ವಿವರ:
ದಾಂಡೇಲಿಯ ಮಾರುತಿ ನಗರದ ನಿವಾಸಿಗಳಾದ ಅಶೋಕ ದೇವಣ್ಣ ಗುರವ (ಎ-1), ಫೈರೋಜ ತಂದೆ ಅಬ್ದುಲಸತ್ತಾರ ದವಲತ್ತಿ (ಎ-2) ಮತ್ತು ಆಸಿಫ @ ಅಕ್ಷರ ಫಕ್ರುದ್ದಿನ ನರಗುಂದ (ಎ-3) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ ಏನು?:
ದಿನಾಂಕ 27-07-2026 ರಂದು ಸಂಜೆ 6:15 ರ ಸುಮಾರಿಗೆ ದಾಂಡೇಲಿಯ ಜಿ.ಎನ್. ರಸ್ತೆಯಲ್ಲಿರುವ ಹನುಮಾನ್ ಬಾರ್ ಬಳಿ ಈ ಮೂವರೂ ಆರೋಪಿಗಳು ಒಟ್ಟುಗೂಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಫಿರ್ಯಾದಿದಾರರೊಂದಿಗೆ ಜಗಳ ತೆಗೆದ ಆರೋಪಿಗಳು, ಅವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಅತ್ಯಂತ ಹೀಯಾಳವಾಗಿ ಜಾತಿ ನಿಂದನೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ, ಫಿರ್ಯಾದಿದಾರರನ್ನು ಜೀವಸಹಿತ ಬಿಡುವುದಿಲ್ಲ ಎಂದು ಕೂಗಾಡುತ್ತಾ, ಮುಂಚಿತವಾಗಿಯೇ ಸಂಚು ರೂಪಿಸಿ ತಂದಿದ್ದ ಮಾರಕಾಸ್ತ್ರಗಳಿಂದ ಅವರ ಮೇಲೆ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಿರ್ಯಾದಿದಾರರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಈ ರಕ್ತಸಿಕ್ತ ಘಟನೆಯ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಾಯ್ದೆಯ ವಿವಿಧ ಸೆಕ್ಷನ್‌ಗಳಾದ 126(2), 352, 351(2), 109, 115(2), 118(1), ಸಚಿವ 3(5) ರನ್ವಯ ಹಾಗೂ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ (SC & ST Atrocities Prevention Act-1989 And Amendment Act-2015) ಯ ಸೆಕ್ಷನ್ 3(1)(r), 3(1)(s), 3(2)(va) ಅಡಿಯಲ್ಲಿ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿತ್ತು.
ಮಿಂಚಿನ ಕಾರ್ಯಾಚರಣೆ – ಆರೋಪಿಗಳ ಪತ್ತೆ:
ಪ್ರಕರಣದ ಗಾಂಭೀರ್ಯತೆಯನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ಪತ್ತೆಗೆ ತಕ್ಷಣವೇ ವಿಶೇಷ ತಂಡವನ್ನು ರಚಿಸುವಂತೆ ಸೂಚಿಸಿದರು. ಮೇಲಾಧಿಕಾರಿಗಳ ನೇರ ಮಾರ್ಗದರ್ಶನದಲ್ಲಿ ದಾಂಡೇಲಿ ಪೊಲೀಸರು ಹಲ್ಲೆ ನಡೆದ ಸ್ಥಳದ ಸುತ್ತಮುತ್ತ ತನಿಖೆ ನಡೆಸಿ, ತಾಂತ್ರಿಕ ನೆರವು ಹಾಗೂ ಖಚಿತ ಬಾತ್ಮೀದಾರರ ಮಾಹಿತಿ ಆಧಾರದ ಮೇಲೆ ಜಾಲ ಬೀಸಿದ್ದರು.
ದಿನಾಂಕ 28-07-2026 ರಂದು ಕಾರ್ಯಾಚರಣೆ ನಡೆಸಿದ ವಿಶೇಷ ಪತ್ತೆ ತಂಡವು ತಲೆಮರೆಸಿಕೊಂಡಿದ್ದ ಮೂವರೂ ಆರೋಪಿಗಳನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧನದ ವೇಳೆ ಆರೋಪಿಗಳು ಕೃತ್ಯ ಎಸಗಲು ಬಳಸಿದ್ದ ಕೋಯಿತಾ (ಕುಡಗೋಲು), ಕಬ್ಬಿಣದ ರಾಡ್ ಹಾಗೂ ಪಲಾಯನ ಮಾಡಲು ಬಳಸಿದ್ದ ಸ್ಕೂಟಿಯನ್ನು ಪೊಲೀಸರು ಪಂಚನಾಮೆಯಂತೆ ಜಪ್ತಿ ಮಾಡಿಕೊಂಡಿದ್ದಾರೆ. ತದನಂತರ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸೂಕ್ತ ರಿಮಾಂಡ್ ವರದಿಯೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ಜೈಲಿಗಟ್ಟಿದೆ.
ಕಾರ್ಯಾಚರಣೆ ನಡೆಸಿದ ದಕ್ಷ ತಂಡ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ ಎಂ. ಎನ್ (ಐ.ಪಿ.ಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜಿ ಹಾಗೂ ಡಿವೈಎಸ್‌ಪಿ ಶ್ರೀ ಶಿವಾನಂದ ಮದರಕಂಡಿ ಅವರ ಸಮರ್ಥ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ದಾಂಡೇಲಿ ವೃತ್ತದ ಸಿ.ಪಿ.ಐ ಶ್ರೀ ಶಿವಾನಂದ ಅಂಬಿಗೇರ ಹಾಗೂ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಅಮೀನ ಎಮ್ ಅತ್ತಾರ, ಕಿರಣ ಬಿ ಪಾಟೀಲ್, ಎ.ಎಸ್.ಐ ಗಳಾದ ರಾಜಪ್ಪ ದೊಡ್ಡಮನಿ, ನಜೀರ ಹಳಿಯಾಳಕರ ಮತ್ತು ಸಿಬ್ಬಂದಿಗಳಾದ ಕೃಷ್ಣಪ್ಪ ಬೆಳವಡಿ, ಸುನೀಲ ಉಗಾರೆ, ಬಸವರಾಜ ತೇಲಸಂಗ, ರಮೇಶ ನಿಂಬರಗಿ, ಪ್ರಸನ್ನಕುಮಾರ ಜಿ.ಎನ್, ಕುಮಾರ ಹರಿಜನ, ಲೋಕೇಶ ದೇವರಡ್ಡಿ, ಚಂದ್ರಶೇಖರ ಪಾಟೀಲ್ ಹಾಗೂ ಉಮೇಶ ಹನಗಂಡಿ ಅವರುಗಳು ಈ ಭೇದಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕ ವಲಯದಲ್ಲಿ ಶಾಂತಿ ಕಾಪಾಡಿದ ಇಡೀ ಪೊಲೀಸ್ ತಂಡದ ದಕ್ಷ ಕರ್ತವ್ಯ ನಿಷ್ಠೆಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.











Leave a Reply