ಭಟ್ಕಳ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು,ಸುಮಾರು 11 ಜಾನುವಾರುಗಳನ್ನು ರಕ್ಷಿಸಿ, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜುಲೈ 20ರಂದು ರಾತ್ರಿ ಸುಮಾರು 9.35 ಗಂಟೆ ವೇಳೆಗೆ, ರಾಷ್ಟ್ರೀಯ ಹೆದ್ದಾರಿ-66ರ ಶಿರಾಲಿ ಚೆಕ್‌ಪೋಸ್ಟ್ ಸಮೀಪ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಗುಜರಾತ್ ನೋಂದಣಿಯ ಲಾರಿಯನ್ನು ತಡೆದು ಪರಿಶೀಲಿಸಿದರು. ಈ ವೇಳೆ ಲಾರಿಯಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಹಾಗೂ ಮೇವು ನೀಡದೆ ಸಾಗಿಸುತ್ತಿರುವುದು ಕಂಡುಬಂದಿದೆ .
ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಜಾನುವಾರುಗಳನ್ನು ಯಾವುದೇ ಅನುಮತಿ ಪಡೆಯದೇ, ವಧೆ ಮಾಡುವ ಉದ್ದೇಶದಿಂದ ಮುರುಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಕೋಕ್ತಿ ನಗರದ ನಿವಾಸಿ ಮೊಹಮ್ಮದ್ ಔಫ್ , ಗುಜರಾತ್ ಬೋಟಾದ ಮೂಲದ ವಿಜಯಬಾಯ್ ಮಕ್ಕಾನ, ತೇಜಾಬಾಯ್ ಶಿಯಾಲಿಯಾ ಹಾಗೂ ದಿಲೀಪ್‌ಬಾಯ್ ರಾಠೋಡ್ ವಿರುದ್ಧ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು ₹4.6 ಲಕ್ಷ ಮೌಲ್ಯದ 11 ಜಾನುವಾರುಗಳು, ₹8 ಲಕ್ಷ ಮೌಲ್ಯದ ಲಾರಿ ಹಾಗೂ ಜಾನುವಾರುಗಳನ್ನು ಕಟ್ಟಲು ಬಳಸಿದ್ದ ಹಗ್ಗಗಳನ್ನು ವಶಪಡಿಸಿಕೊಂಡಿದ್ದಾರೆ.
ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ವಿನೋದ ಕುಮಾರ, ಸಂತೋಷ ನಾಯ್ಕ, ಕಿರಣ ತಿಳಗಂಜಿ ಹಾಗೂ ಮಂಜುನಾಥ ಖಾರ್ವಿ ಭಾಗವಹಿಸಿದ್ದರು.











Leave a Reply