
ಯಲ್ಲಾಪುರವನ್ನು ಹೊಂಡಾಪುರ ಮಾಡಿದ ಕೀರ್ತಿ ಶಾಸಕ ಹೆಬ್ಬಾರ್ ಅವರಿಗೆ ಸಲ್ಲುತ್ತದೆ…..
ಯಲ್ಲಾಪುರ:
: ಈ ಹಿಂದೆ ಉಳುವವನೆ ಭೂಮಿಯ ಒಡೆಯ ಎಂಬ ಮಾತಿತ್ತು. ಆದರೆ ಈಗ ಉಳ್ಳವನೆ ಜಿ + 2 ಮನೆಯ ವಡೆಯ ಎಂಬಂತೆ ಜನಪ್ರತಿನಿಧಿಗಳು – ಅಧಿಕಾರಿ ಮಾಡಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಯಲ್ಲಾಪುರ ತಾಲೂಕಿನಲ್ಲಿರುವ ವಸತಿ ರಹಿತ ಬಡವರಿಗೆ ಸೂರು ಒದಗಿಸಬೇಕು ಎಂಬ ಉದೇಶದಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಿಜೆಪಿ ಸರ್ಕಾರ ಇದ್ದಾಗ ಮನೆ ಮಂಜೂರಾಗಿತ್ತು. ನಂತರ ಅದರ ನಿರ್ಮಾಣವಾದ ನಂತರವೂ ಈಗಿರುವ ಸರ್ಕಾರ ಅದನ್ನು ನೀಡದೆ ಬಡವರನ್ನು ನಿರ್ಲಕ್ಷ್ಯ ಮಾಡಿತ್ತು. ಇದನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟನೆ ಮಾಡಿದ ಮೇಲೆ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಿದೆ. ಆದರೆ ಬಡವರಿಗೆ, ವಸತಿ ರಹಿತರಿಗೆ ನೀಡಬೇಕಿದ್ದ ಮನೆಯನ್ನು ಉಳ್ಳರಿಗೆ ನೀಡಿದೆ.
ಮನೆ ಅಗತ್ಯವಿರುವ ಅರ್ಹರಿಗೆ ವಸತಿ ದೊರೆಯದೇ, ಆರ್ಥಿಕವಾಗಿ ಸ್ಥಿತಿವಂತರಿಗೆ ಮನೆ ಮಂಜೂರು ಮಾಡಲಾಗಿದೆ ಎಂಬ ದೂರುಗಳಿವೆ. ಅಧಿಕಾರಿಗಳ ಕಾರ್ಯವೈಖರಿಯಿಂದ ಶಾಸಕರಿಗೂ ಮುಜುಗರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮನೆ ಹಂಚಿಕೆ ಪ್ರಕ್ರಿಯೆಯನ್ನು ಮರುಪರಿಶೀಲಿಸಿ ಸಂಪೂರ್ಣ ಪಾರದರ್ಶಕತೆ ತರಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಹಲವು ಬಾರಿ ಜಿ + 2 ಮನೆ ವಿತರಣೆಯಲ್ಲಿ ಅಕ್ರಮವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ತಾಲೂಕಾಡಳಿತಕ್ಕೆ ಆಗ್ರಹಿಸಿದರು ತಾಲೂಕು ಆಡಳಿತ ನಿಷ್ಕ್ರೀಯವಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಈ ಹಿಂದೆಯೆ ಗಮನಿಸಬೇಕಿತ್ತು. ಆದರು ಅದು ಜಿಲ್ಲಾಧಿಕಾರಿಗಳ ಗಮನಕ್ಕೆ ಬರದೆ ಇದ್ದದ್ದು ವಿಪರ್ಯಾಸವೇ ಸರಿ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇನ್ನು ಯಲ್ಲಾಪುರ ತಾಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹೊಂಡಗಳಿಂದ ಕೂಡಿದ್ದು ಪ್ರತಿನಿತ್ಯವೂ ವಾಹನ ಸವಾರರು ಯಾತನೆ ಪಡುವಂತಾಗಿದೆ. ನಾಲ್ಕು ಬಾರಿ ಗೆದ್ದು ಅಧಿಕಾರದಲ್ಲಿರುವ ಶಾಸಕರು ರಸ್ತೆ ದುರಸ್ತಿಗೆ ಅನುದಾನ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದು , ಯಲ್ಲಾಪುರವನ್ನು ಹೊಂಡಾಪುರ ಮಾಡಿದ ಕೀರ್ತಿ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಸಲ್ಲಬೇಕು ಎಂದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ವಕೀಲ ಗಣೇಶ ಪಾಟಣಕರ್ ಮಾತನಾಡಿ, ಕೊಳಚೆ ನಿರ್ಮೂಲನಾ ಮಂಡಳಿಯ ವಸತಿ ಹಂಚಿಕೆಯಲ್ಲಿ ನಿಗದಿತ ನಿಯಮಾವಳಿಗಳನ್ನು ಪಾಲಿಸಲಾಗಿಲ್ಲ ಎಂದು ಆರೋಪಿಸಿದರು. ಎಪಿಎಲ್ ಪಡಿತರ ಚೀಟಿ ಹೊಂದಿರುವವರು, ಕೃಷಿ ಭೂಮಿ ಅಥವಾ ಅಂಗಡಿ-ಮುಂಗಟ್ಟು ಹೊಂದಿರುವವರಿಗೂ ಮನೆ ನೀಡಲಾಗಿದೆ ಎಂಬ ಆರೋಪಗಳಿವೆ. ಕೆಲವರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಪಡೆದಿದ್ದು, ಅವುಗಳನ್ನು ಒಗ್ಗೂಡಿಸಿ ಬಳಸಿಕೊಂಡಿರುವ ಘಟನೆಗಳೂ ನಡೆದಿವೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದರು.
ನಿಜವಾದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಈ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು. ನಿಯಮಬಾಹಿರವಾಗಿ ಮನೆ ಪಡೆದಿರುವುದು ತನಿಖೆಯಲ್ಲಿ ಸಾಬೀತಾದರೆ ಅಂತಹ ಮನೆಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಜಿ+2 ಮನೆಗಳ ಹಂಚಿಕೆಯಲ್ಲಿ ಸರ್ಕಾರದ ಸುತ್ತೋಲೆಗಳು ಮತ್ತು ನಿಯಮಗಳಿಗೆ ಸೂಕ್ತ ಗೌರವ ನೀಡಲಾಗಿಲ್ಲ ಎಂದು ಆರೋಪಿಸಿದರು. ಉಳ್ಳವರಿಗೆ ಹಾಗೂ ಶಾಸಕರ ಆಪ್ತ ವಲಯಕ್ಕೆ ಸೇರಿದವರಿಗೆ ಮನೆ ನೀಡಲಾಗಿದೆ ಎಂಬ ಆರೋಪಗಳಿದ್ದು, ಫಲಾನುಭವಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗಿದೆ ಎಂಬ ದೂರುಗಳೂ ಇವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಎಂದು ಹೇಳಿದರು.
ಮನೆ ಹಂಚಿಕೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಗ್ರ ಪರಿಶೀಲನೆ ನಡೆಸಬೇಕು. ನಿಯಮಾನುಸಾರ ಅರ್ಹರಾಗಿರುವ ಬಡ ಕುಟುಂಬಗಳಿಗೆ ಮನೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಫಲಾನುಭವಿ ನಾಗರಾಜ ನಾಯ್ಕ ಮಾತನಾಡಿ, ಹೊರ ಜಿಲ್ಲೆಗಳಿಂದ ಬಂದವರು ಹಾಗೂ ಈಗಾಗಲೇ ಆಸ್ತಿ ಹೊಂದಿರುವ ಕೆಲವರಿಗೂ ಮನೆ ದೊರೆತಿದೆ ಎಂಬ ಆರೋಪ ಮಾಡಿದರು. ಆದರೆ ನಿಜವಾದ ನಿರ್ಗತಿಕರು ಮತ್ತು ಬಡ ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ. ಆಗಿರುವ ಅನ್ಯಾಯವನ್ನು ಸರಿಪಡಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದೇವಾಡಿಗ ಉಪಸ್ಥಿತರಿದ್ದರು.















Leave a Reply