ಮುಂಗಾರು ಮಳೆ ಮತ್ತೆ ಪ್ರಭಲವಾಗುವ ಲಕ್ಷಣಗಳಿದ್ಯಾ?? ಪ್ರತಿಯೊಬ್ಬ ನೂ ನೋಡಬೇಕಾದ ಹವಾಮಾನ ವರದಿ….

ಹಂಚಿಕೊಳ್ಳಿ

25-7-2026 ಶನಿವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.

ಕರಾವಳಿಯ ಉ.ಕ ಉಡುಪಿ ಜಿಲ್ಲೆಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿತ್ತು. ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದು ಉಳಿದಂತೆ ಮಲೆನಾಡು – ಒಳನಾಡಿನ ಜಿಲ್ಲೆಗಳಲ್ಲಿಯೂ ಮಳೆ ಕಡಿಮೆ ಆಗಿದ್ದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬೆಳಿಗ್ಗೆ ಮಳೆ ಕಡಿಮೆ ಇರಲಿದ್ದು ಮೋಡ – ಬಿಸಿಲಿನ ವಾತಾವರಣ ಮುಂದುವರೆಯಲಿದೆ. ಮಧ್ಯಾಹ್ನ – ರಾತ್ರಿ ತನಕ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಒಂದೆರಡು ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉ. ಕ ಉಡುಪಿ ಕರಾವಳಿ – ಮಂಗಳೂರು ತನಕ ಕರಾವಳಿ ತೀರಗಳಲ್ಲಿ ಮಳೆ ಪ್ರಮಾಣ ಜಾಸ್ತಿ ಇರಬಹುದು. ಬಂಗಾಳಕೊಲ್ಲಿ ಉತ್ತರದಲ್ಲಿ ಇನ್ನೊಂದು ವಾಯುಭಾರಕುಸಿತ ಆಗುವ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಜುಲೈ ಕೊನೆಗೆ – ಆಗಸ್ಟ್ ಮೊದಲ ವಾರ ಸಾಧಾರಣ ಮಳೆ ಮುಂದುವರೆಯಲಿದೆ.

ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಸಂಜೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಮೋಡ – ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು. ಮುಂದಿನ ಕೆಲವು ದಿನ ಇದೇ ವಾತಾವರಣ ಮುಂದುವರೆಯಲಿದ್ದು ಸದ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ ಇಲ್ಲ.

ದಕ್ಷಿಣ ಒಳನಾಡಿನ ಬೆಂಗಳೂರು – ಗ್ರಾಮಾಂತರ ಕೋಲಾರ ಮಂಡ್ಯ ರಾಮನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಮೈಸೂರು ಚಾಮರಾಜನಗರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳಲ್ಲಿ ಮೋಡದ ವಾತಾವರಣ – ಅಲ್ಲಲ್ಲಿ ತುಂತುರು ಮಳೆ ಮುಂದುವರೆಯಬಹುದು. ಮುಂದಿನ ಕೆಲವು ದಿನ ಮಳೆ ಕಡಿಮೆಯಾಗಿ ಮೋಡದ ವಾತಾವರಣ ಇರಬಹುದು.

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯಾಗಬಹುದು.

ಗುಜರಾತಿನಲ್ಲಿರುವ ಸರ್ಕ್ಯುಲೇಷನ್ ನಾಳೆ ರಾಜಸ್ಥಾನ ಮೂಲಕ ವಾಯುವ್ಯದತ್ತ ಚಲಿಸಿ ಶಿಥಿಲ ಆಗಬಹುದು. ಬಂಗಾಳಕೊಲ್ಲಿಯ ಉತ್ತರದಲ್ಲಿ ನಾಳೆ ಇನ್ನೊಂದು ಲೋ ಪ್ರೆಷರ್ ಆಗುವ ಮುನ್ಸೂಚನೆ ಇರುವ ಕಾರಣ ಮಹಾರಾಷ್ಟ್ರ ಕರಾವಳಿ ಕೊಂಕಣ ತೀರ, ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಬಹುದು.

Leave a Reply

Your email address will not be published. Required fields are marked *