ಸಿದ್ದಾಪುರ: ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ತಾರೇಸರ ಹಾಗೂ ಕುಚಗುಂಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಿಸಲಾಗಿದೆ.
ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಸಭಾಂಗಣ ಹಾಗೂ ತಾರೇಸರದ ಸಭಾಭವನದಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಹೊಲಿಗೆ ತರಬೇತಿ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮನೆಯಲ್ಲಿಯೇ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತಹ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದೆ ಎಂದರು.
ಒಂದು ತಿಂಗಳ ಅವಧಿಯಲ್ಲಿ ನುರಿತ ತರಬೇತುದಾರರಿಂದ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ತರಬೇತಿಗೆ ಅಗತ್ಯವಾದ ಹೊಲಿಗೆ ಯಂತ್ರದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೌಶಲ್ಯಾಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಹಸ್ರಗೋಡ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ವಉದ್ಯೋಗ ತರಬೇತಿ ನೀಡಬೇಕೆಂಬ ಅನಂತಮೂರ್ತಿ ಹೆಗಡೆಯವರ ಆಶಯ ಈ ಶಿಬಿರದ ಮೂಲಕ ಕಾರ್ಯರೂಪಕ್ಕೆ ಬರುತ್ತಿದೆ. ಮಹಿಳೆಯರು ಸ್ವಂತ ಉದ್ಯೋಗದ ಮೂಲಕ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಷ್ಟು ಸಬಲರಾಗಬೇಕು ಎಂದರು.
ನಾರಾಯಣ ಹೆಗಡೆ ತಾರೇಸರ ಮಾತನಾಡಿ, ಹೊಲಿಗೆ ಕಲೆ ಕಲಿಯುವುದರಿಂದ ಮಹಿಳೆಯರಿಗೆ ಉದ್ಯೋಗದ ಹೊಸ ಅವಕಾಶಗಳು ದೊರೆಯಲಿವೆ. ನಮ್ಮ ಗ್ರಾಮದಲ್ಲಿ ಉಚಿತ ತರಬೇತಿ ಶಿಬಿರ ಆರಂಭಿಸಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ, ಆರ್.ಜಿ. ಭಟ್ ಯಲೂಗಾರ, ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ, ನವೀನ ಹೆಗಡೆ ತಾರೇಸರ ಹಾಗೂ ತರಬೇತುದಾರರಾದ ವೀಣಾ ಕೊಳಗಿಬೀಸ್, ಆಶಾ ಶಿರಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನಕ್ಕೆ ಇದೀಗ ಆದ್ಯತೆ ನೀಡಲಾಗಿದೆ. ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ತಮ್ಮದೇ ಆದ ಉದ್ಯೋಗ ಆರಂಭಿಸುವಂತಾಗಬೇಕು ಎಂಬುದು ಶಿಬಿರದ ಆಶಯವಾಗಿದೆ.
ಗ್ರಾಮೀಣ ಮಹಿಳೆಯರಿಗೆ ಉದ್ಯೋಗದ ದಾರಿ; ಅನಂತಮೂರ್ತಿ ಹೆಗಡೆ ಟ್ರಸ್ಟ್‌ನಿಂದ ಉಚಿತ ಹೊಲಿಗೆ ತರಬೇತಿ












Leave a Reply