ಶಿರಸಿ: ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಮಹಾಸ್ವಾಮಿಗಳೊಂದಿಗೆ ಅರಣ್ಯ ಅತಿಕ್ರಮಣದಾರರ ವೇದಿಕೆಯ ಅಧ್ಯಕ್ಷ ಹಾಗೂ ಹೋರಾಟಗಾರ, ವಕೀಲ ಎ. ರವೀಂದ್ರ ನಾಯ್ಕ್ ಅವರು ಒಂದು ಗಂಟೆಗೂ ಅಧಿಕ ಕಾಲ ಶ್ರೀಗಳ ಬಳಿ ಮಹತ್ವದ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಅರಣ್ಯ ವಾಸಿಗಳ ಹಕ್ಕುಗಳು, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳು, ಬೆಟ್ಟದ ಹಕ್ಕು, ಕೇಂದ್ರ ಸರ್ಕಾರದ ಅರಣ್ಯ ಮತ್ತು ಭೂ ಸಂಬಂಧಿತ ಕಾನೂನುಗಳ ಅನುಷ್ಠಾನ ಬಗ್ಗೆ, ಪರಿಸರ ಸಂರಕ್ಷಣೆ, ಬೇಡ್ತಿ–ಅಘನಾಶಿನಿ ನದಿ ಜೋಡಣೆ ಯೋಜನೆ ಹಾಗೂ ಪಶ್ಚಿಮ ಘಟ್ಟದ ಪರಿಸರ ಸಮತೋಲನಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಹಲವು ದಶಕಗಳಿಂದ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬಗಳ ಹಕ್ಕುಗಳ ರಕ್ಷಣೆ ಮಾಡುವುದು, ಅವರಿಗೆ ಕಾನೂನಿನಡಿ ದೊರೆಯಬೇಕಾದ ಎಲ್ಲ ರೀತಿಯ ಸೌಲಭ್ಯಗಳು, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿರುವ ಅಡೆ ತಡೆಗಳು ಹಾಗೂ ಬೆಟ್ಟದ ಹಕ್ಕುಗಳಿಗೆ ಸಂಬಂಧಿಸಿದ ಗೊಂದಲಗಳ ಬಗ್ಗೆ ಎ. ರವೀಂದ್ರ ನಾಯ್ಕ್ ಅವರು ಸ್ವರ್ಣವಲ್ಲಿ ಮಹಾಸ್ವಾಮಿಗಳ ಗಮನ ಸೆಳೆದರು. ಈ ವಿಷಯಗಳಿಗೆ ಕಾನೂನಿನ ಚೌಕಟ್ಟಿನೊಳಗೆ ನ್ಯಾಯಯುತ ಪರಿಹಾರ ದೊರಕುವಂತೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಬೇಡ್ತಿ–ಅಘನಾಶಿನಿ ನದಿ ಜೋಡಣೆ ಯೋಜನೆಯಿಂದ ನಮ್ಮ ಪರಿಸರ ಹಾಗೂ ಸಾಮಾಜಿಕ ಪರಿಣಾಮ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ, ಅರಣ್ಯ ಸಂಪತ್ತು, ಜಲಮೂಲಗಳು, ಕೃಷಿ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಯಿತು. ಸಾರ್ವಜನಿಕರಲ್ಲಿ ಇರುವ ಅನುಮಾನಗಳನ್ನು ನಿವಾರಿಸಿ, ಪರಿಸರ ಹಾಗೂ ಜನಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪರಿಸರದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳು, ನದಿಗಳ ಸ್ವಾಭಾವಿಕ ಹರಿವು, ಪರಿಸರ ಸಮತೋಲನ ಮತ್ತು ಭವಿಷ್ಯದ ಜಲಸಂಪನ್ಮೂಲಗಳ ಸಂರಕ್ಷಣೆಯ ಅಗತ್ಯತೆಯ ಕುರಿತೂ ಸಮಾಲೋಚನೆ ನಡೆಯಿತು. ಅಭಿವೃದ್ಧಿ ಯೋಜನೆಗಳು ಪರಿಸರಕ್ಕೆ ಧಕ್ಕೆಯಾಗದಂತೆ ಹಾಗೂ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ರೂಪುಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ಉಳಿವಿಗೆ ಕಾನೂನು ಹೋರಾಟವೇ ಹೆಚ್ಚು ಪರಿಣಾಮಕಾರಿ ಎಂದು ಎ. ರವೀಂದ್ರ ನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು, ಕಾನೂನು ಹೋರಾಟದ ಸಿದ್ಧತೆಯನ್ನು ಕಣಿವೆ ಸಂರಕ್ಷಣಾ ಸಮಿತಿ ಮಾಡುತ್ತಿದೆ ಎಂದು ತಿಳಿಸಿದರು.
ಅರಣ್ಯವಾಸಿಗಳ ಮೂಲಕ ದಶಲಕ್ಷ ಗಿಡಗಳನ್ನು ನೆಡುವ ಅಭಿಯಾನಕ್ಕೆ ಪ್ರೇರಣೆ ನೀಡಿರುವ ಎ. ರವೀಂದ್ರ ನಾಯ್ಕ್ ಅವರ ಕಾರ್ಯವನ್ನು ಸ್ವರ್ಣವಲ್ಲಿ ಮಹಾಸ್ವಾಮಿಗಳು ಶ್ಲಾಘಿಸಿ ಅಭಿನಂದಿಸಿದರು.
ಇತ್ತೀಚಿನ ದಿನಗಳಲ್ಲಿ ಬೇಡ್ತಿ–ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದು, ಎ. ರವೀಂದ್ರ ನಾಯ್ಕ್ ಅವರು ಪರಿಸರ ಸಂರಕ್ಷಣೆ, ಅರಣ್ಯವಾಸಿಗಳ ಹಕ್ಕುಗಳು ಹಾಗೂ ಬೆಟ್ಟದ ಹಕ್ಕುಗಳ ಕುರಿತಂತೆ ನಿರಂತರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಪರಿಸರ ಹಾಗೂ ಜನಜೀವನದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಸುರೇಶ್ ಹಕ್ಕಿಮನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.













Leave a Reply