ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಮತ್ತೊಮ್ಮೆ ಚಿಕ್ಕ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳಚೆ-ಯಲ್ಲಾಪುರ ಮುಖ್ಯ ರಸ್ತೆಯ ಮೇಲೆ ಬೃಹತ್ ಬಂಡೆಕಲ್ಲುಗಳು ಹಾಗೂ ಮಣ್ಣು ಕುಸಿದು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.
ಘಟನೆಯ ವಿವರ
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲಗೊಂಡು ಗುರುವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. ಮುಖ್ಯ ರಸ್ತೆಗೆ ಬಂಡೆಗಳು ಉರುಳಿ ಬಿದ್ದಿರುವುದರಿಂದ ಕಳಚೆ ಗ್ರಾಮ ಮತ್ತು ಸುತ್ತಮುತ್ತಲಿನ ಉಪಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ. ರಸ್ತೆಯ ಮೇಲಿರುವ ಕಲ್ಲುಗಳನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ.
ಮರುಕಳಿಸಿದ ಹಳೆಯ ಭೀತಿ
ಕಳೆದ 5-6 ವರ್ಷಗಳ ಹಿಂದೆ ಕಳಚೆ ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ಇಡೀ ಗ್ರಾಮವನ್ನೇ ಅಸ್ತವ್ಯಸ್ತಗೊಳಿಸಿತ್ತು. ಅಂದು ಉಂಟಾಗಿದ್ದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಮತ್ತು ಜೀವಭಯದ ಕಹಿ ನೆನಪುಗಳು ಇಂದಿಗೂ ಹಸಿರಾಗಿವೆ. ಈಗ ಮತ್ತೆ ಚಿಕ್ಕ ಪ್ರಮಾಣದಲ್ಲಿ ಭೂಕುಸಿತ ಆರಂಭವಾಗಿರುವುದು, ಅಂದಿನ ಭೀಕರ ದುರಂತ ಮತ್ತೆ ಮರುಕಳಿಸಬಹುದೇ ಎಂಬ ತೀವ್ರ ಆತಂಕವನ್ನು ಸ್ಥಳೀಯ ನಿವಾಸಿಗಳಲ್ಲಿ ಸೃಷ್ಟಿಸಿದೆ.
ಕಳಚೆಯಲ್ಲಿ ಮತ್ತೆ ಗುಡ್ಡಕುಸಿತವಾಗಿದೆ. ರಸ್ತೆಗಳ ಮೇಲೆ ಕಲ್ಲುಗಳು ಬಂದಿದೆ.ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಗ್ಗೆ ಸ್ಥಳಿಯ ತಾಲೂಕಾಡಳಿತ ಶೀಘ್ರ ಗಮನಹರಿಸಬೇಕು.
ವೆಂಕಟ್ರಮಣ ಬೆಳ್ಳಿ
ಸಾಮಾಜಿಕ ಮುಖಂಡರು













Leave a Reply