ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ

ಹಂಚಿಕೊಳ್ಳಿ

ಯಲ್ಲಾಪುರ : ಯುವ ಜನಾಂಗವು ಮಾದಕ ವ್ಯಸನದತ್ತ ಹೆಚ್ಚು ಆಕರ್ಷಿತಗೊಳ್ಳುತ್ತಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಆರೋಗ್ಯ ಭಾರತಿ ಉಪಾಧ್ಯಕ್ಷ ಡಾ. ನಾಗರಾಜ ಭಟ್ ಹೇಳಿದರು.

ಯಲ್ಲಾಪುರದ ವಾಯ್ ಟಿ ಎಸ್ ಎಸ್  ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಭಾರತಿ ಯಲ್ಲಾಪುರ ತಾಲೂಕು ಶಾಖೆ ಹಾಗೂ ವಾಯ್ ಟಿ ಎಸ್ ಎಸ್ ನ  ಎನ್ ಎಸ್ ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಾದಕ ವ್ಯಸನದ ದುಷ್ಪರಿಣಾಮಗಳು’ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳ ಕುರಿತು ಪವರ್‌ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಆನಂದ ಹೆಗಡೆ ಮಾತನಾಡಿ, ಆರೋಗ್ಯ ಭಾರತಿ ವತಿಯಿಂದ ಹಮ್ಮಿಕೊಂಡಿರುವ ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಭಾರತಿ ತಾಲೂಕು ಅಧ್ಯಕ್ಷ ಎಸ್.ಟಿ. ಭಟ್ ಮಾತನಾಡಿ, ಭಾರತದಲ್ಲಿ 10ರಿಂದ 17 ವರ್ಷ ವಯಸ್ಸಿನ ಸುಮಾರು 1.5 ಕೋಟಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯ ಮಾದಕ ವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬೆಂಗಳೂರು ನಗರವೊಂದರಲ್ಲೇ ಶೇ.30ರಷ್ಟು ಶಾಲಾ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ ಹಾಗೂ ವರ್ಷದಿಂದ ವರ್ಷಕ್ಕೆ ಮಾದಕ ವಸ್ತುಗಳ ಬಳಕೆ ಶೇ.25ರಷ್ಟು ಹೆಚ್ಚಾಗುತ್ತಿದೆ ಎಂಬ ಅಧ್ಯಯನ ವರದಿಗಳಿವೆ ಎಂದು ಹೇಳಿದರು.

ಆರೋಗ್ಯ ಭಾರತಿ ಸಹ ಕಾರ್ಯದರ್ಶಿ ಮಂಜುನಾಥ ಬಿ. ಶೇಟ್ ಜಾಗೃತಿ ಗೀತೆ ಪ್ರಸ್ತುತಪಡಿಸುವುದರ ಜೊತೆಗೆ ಕಾರ್ಯಕ್ರಮ ನಿರ್ವಹಿಸಿದರು. NSS ಕಾರ್ಯಕ್ರಮಾಧಿಕಾರಿ ರೇಷ್ಮಾ ಶೇಖ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಆರೋಗ್ಯ ಭಾರತಿ ಕಾರ್ಯದರ್ಶಿ ಶ್ರೀಪಾದ ಹೆಗಡೆ  ಸ್ವಾಗತಿಸಿದರು. ಆರೋಗ್ಯ ಭಾರತಿ ಶಿರಸಿ ಜಿಲ್ಲಾ ಸಂಯೋಜಕ ನಾಗೇಶ್ ಪತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಹರಿಶ್ಚಂದ್ರ ಹರಿಕಾಂತ್ ವಂದನಾರ್ಪಣೆ ಸಲ್ಲಿಸಿದರು.

ಆರೋಗ್ಯ ಭಾರತಿ ಸದಸ್ಯರಾದ ಗುರುಪಾದ ಹೆಗಡೆ, ಉಮಾ ಯಲ್ಲಾಪುರಕರ್, ಚಂದ್ರಪ್ರಭಾ ಬೈಂದೂರು ಹಾಗೂ ವಿನಾಯಕ ಮಡಗಾಂವಕರ್ ಉಪಸ್ಥಿತರಿದ್ದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *