ಶಿರಸಿ: ಗ್ರಾಮೀಣ ಪ್ರದೇಶಗಳ ಅಂಚೆ ಕಚೇರಿಗಳಲ್ಲಿ ಬಿಎಸ್ಎನ್ಎಲ್ ಸಿಮ್ ಕಾರ್ಡ್ಗಳ ಕೊರತೆಯಿಂದಾಗಿ ಅಂಚೆ ಹಾಗೂ ಹಣಕಾಸು ಸೇವೆಗಳನ್ನು ಪಡೆಯಲು ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆ ಇದೀಗ ನಿವಾರಣೆಯಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಯ ಹಿನ್ನೆಲೆಯಲ್ಲಿ ರಾಜ್ಯದ ಬಿಎಸ್ಎನ್ಎಲ್ ನೆಟ್ವರ್ಕ್ ವ್ಯಾಪ್ತಿಯಲ್ಲಿರುವ ಒಟ್ಟು 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಸಿಮ್ ಕಾರ್ಡ್ಗಳನ್ನು ಒದಗಿಸಿ ಸಕ್ರಿಯಗೊಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ 43, ಶಿವಮೊಗ್ಗ ಜಿಲ್ಲೆಯ 22 ಹಾಗೂ ಚಿಕ್ಕಮಗಳೂರು ಜಿಲ್ಲೆಯ 2 ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ಹೊರತುಪಡಿಸಿ ಇತರೆ ಖಾಸಗಿ ಮೊಬೈಲ್ ನೆಟ್ವರ್ಕ್ಗಳ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಸಿಮ್ಗಳ ಕೊರತೆಯಿಂದ ಗ್ರಾಮೀಣ ಭಾಗದ ವೃದ್ಧರು, ರೈತರು, ವಿಧವೆಯರು ಹಾಗೂ ವಿಕಲಚೇತನರು ಪಿಂಚಣಿ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಹಣಕಾಸು ವ್ಯವಹಾರಗಳನ್ನು ನಡೆಸಲು ತೊಂದರೆ ಅನುಭವಿಸುತ್ತಿದ್ದರು.
Hallinews.com
ಈ ಸಮಸ್ಯೆ ಕುರಿತು ಸಾರ್ವಜನಿಕರಿಂದ ಬಂದ ಮನವಿಗಳನ್ನು ಪರಿಗಣಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ಭೇಟಿ ಮಾಡಿ, ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ತುರ್ತಾಗಿ ಬಿಎಸ್ಎನ್ಎಲ್ ಸಿಮ್ಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಇದೀಗ ಬಿಎಸ್ಎನ್ಎಲ್ ನೆಟ್ವರ್ಕ್ ಇರುವ ಎಲ್ಲ 67 ಗ್ರಾಮೀಣ ಅಂಚೆ ಕಚೇರಿಗಳಿಗೆ ಸಿಮ್ ಕಾರ್ಡ್ಗಳನ್ನು ಪೂರೈಸಿ ಸಕ್ರಿಯಗೊಳಿಸಿದೆ.
ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಅಡಚಣೆಯಾಗಿದ್ದ ಅಂಚೆ ಹಾಗೂ ಹಣಕಾಸು ಸೇವೆಗಳು ಮತ್ತೆ ಸುಗಮವಾಗಿ ದೊರೆಯುವಂತಾಗಿದೆ. ವಿಶೇಷವಾಗಿ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಗ್ರಾಮೀಣ ಜನರು ಎದುರಿಸುತ್ತಿದ್ದ ಸಂಪರ್ಕ ಮತ್ತು ಹಣಕಾಸು ಸೇವೆಯ ಪ್ರಮುಖ ಸಮಸ್ಯೆ ಪರಿಹಾರವಾದಂತಾಗಿದೆ ಎಂದು ಸಂಸದರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.














Leave a Reply