ಶ್ರಾವಣ ಮಾಸದ ಅಂಗವಾಗಿ ಶಿರಸಿಯಲ್ಲಿ ಮಹಿಳಾ ಹಾಲು ಉತ್ಪಾದಕರಿಗೆ ಅರಿಶಿಣ-ಕುಂಕುಮ ಕಾರ್ಯಕ್ರಮ

ಹಂಚಿಕೊಳ್ಳಿ

ಶಿರಸಿ: ಶ್ರಾವಣ ಮಾಸದ ಪ್ರಯುಕ್ತ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಮಹಿಳಾ ಹಾಲು ಉತ್ಪಾದಕ ರೈತರಿಗಾಗಿ ವಿಶೇಷ ಅರಿಶಿಣ-ಕುಂಕುಮ ಕಾರ್ಯಕ್ರಮವನ್ನು ಶಿರಸಿ ನಗರದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವೈದ್ಯೆ ಡಾ. ಸುಮನ್ ಹೆಗಡೆ, ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ, ವೇದಾ ಹೆಗಡೆ ನೀರ್ನಳ್ಳಿ, ಸುಮಾ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹಾಗೂ ಭಾಗ್ಯಾ ಹೆಗಡೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಅಧಿಕಾರ ಅಥವಾ ಹುದ್ದೆಯ ಮಿತಿಯನ್ನು ಮೀರಿ ಪರಸ್ಪರ ಬಾಂಧವ್ಯ ಮತ್ತು ಗೌರವವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಹಾಲು ಸಂಘಗಳ ಆಡಳಿತಾತ್ಮಕ ವಿಚಾರಗಳ ಸಂದರ್ಭದಲ್ಲಿ ಮಾತ್ರ ಮಹಿಳಾ ಸದಸ್ಯರೊಂದಿಗೆ ಸಂಪರ್ಕ ಹೊಂದುವ ಬದಲು, ಅವರ ಸೇವೆ ಹಾಗೂ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ತಮ್ಮ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಹಾಗೂ ಸಹೋದರಿಯರ ಪ್ರೀತಿ-ಮಮತೆಯಲ್ಲಿ ಬೆಳೆದಿರುವುದರಿಂದ ಮಹಿಳೆಯರ ಬಗ್ಗೆ ವಿಶೇಷ ಗೌರವ ಮತ್ತು ಭಾವನೆ ಹೊಂದಿರುವುದಾಗಿ ಅವರು ತಿಳಿಸಿದರು. ಮಹಿಳೆಯರ ಸಲಹೆ, ಸೂಚನೆ ಮತ್ತು ಆಶೀರ್ವಾದ ಪಡೆದು ಸಮಾಜಮುಖಿ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸದ ಸಂಗತಿ. ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯಿಂದ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು. ಮುಂದಿನ ಪೀಳಿಗೆಯಲ್ಲೂ ಮಹಿಳೆಯರನ್ನು ಗೌರವಿಸುವ ಮನೋಭಾವ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ ಮಾತನಾಡಿ, ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಅರಿಶಿಣ-ಕುಂಕುಮ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು. ತಮ್ಮ ವೃತ್ತಿಜೀವನದಲ್ಲಿ ತಾಯಿಯ ಪರಿಶ್ರಮ ಮತ್ತು ಪ್ರೋತ್ಸಾಹ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಡಾ. ಸುಮನ್ ಹೆಗಡೆ ಮಾತನಾಡಿ, ಮಗುವಿನ ಜೀವನದಲ್ಲಿ ತಾಯಿಯೇ ಮೊದಲ ಶಿಕ್ಷಕಿ. ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಉತ್ತಮ ಸಂಸ್ಕಾರ, ಓದುವ ಹವ್ಯಾಸ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದರು.

ಮಹಿಳೆಯರು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಸಮತೋಲನದ ಆಹಾರ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾಗ್ಯಾ ಹೆಗಡೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ವಿಶೇಷ ಗೌರವದ ಸ್ಥಾನವಿದೆ. ಅರಿಶಿಣ ಮತ್ತು ಕುಂಕುಮವು ನಮ್ಮ ಸಂಸ್ಕೃತಿಯ ಪ್ರಮುಖ ಸಂಕೇತಗಳಾಗಿದ್ದು, ಮಹಿಳೆಯರ ಗೌರವ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತವೆ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ವೇದಾ ಹೆಗಡೆ ನೀರ್ನಳ್ಳಿ ಮಾತನಾಡಿ, ಮಹಿಳೆಯರನ್ನು ಸಹೋದರಿಯರಂತೆ ಪರಿಗಣಿಸಿ ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತಸ ತಂದಿದೆ. ತಮ್ಮ ದೈನಂದಿನ ಕಾರ್ಯದ ಒತ್ತಡದ ನಡುವೆಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಕಾರ್ಯಕ್ರಮದ ವಿಶೇಷತೆ ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಅನಸೂಯಾ ಹೆಗಡೆ ಸಹಕರಿಸಿದರು. ಚಂದನಾ ಹೆಗಡೆ ಸ್ವಾಗತಿಸಿದರು. ಜವಳಗುಂಡಿ ಹಾಲು ಉತ್ಪಾದಕರ ಮಹಿಳಾ ಸಂಘದ ಲೀಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ಚಂದ್ರ ಹೆಗಡೆ ವಂದಿಸಿದರು.

ಶಿರಸಿ ತಾಲೂಕಿನ ವಿವಿಧ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಮಹಿಳಾ ಹಾಲು ಉತ್ಪಾದಕ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *