ಕೌರಿಗದ್ದೆಯ ಮಣ್ಣಿನ ಮಗ ಸತೀಶನ ಸಾಧನೆ: ವಿಘ್ನೇಶ್ವರ ಭಟ್-ಸುಶಿಲಾ ದಂಪತಿಯ ಶ್ರಮ ಸಾರ್ಥಕ; ಪ್ರಥಮ ಯತ್ನದಲ್ಲೇ ಸಿಎ ಪಾಸ್ !!!!!!

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ಕೌರಿಗದ್ದೆಯ ಪ್ರತಿಭೆ ಸತೀಶ ಭಟ್ ಕೌರಿಗದ್ದೆ ಅವರು ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲೊಂದಾದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ  ಸಾಧನೆ ಮಾಡಿದ್ದಾರೆ.

ಕೌರಿಗದ್ದೆಯ ಸಾಮಾನ್ಯ ಕೃಷಿ ಕುಟುಂಬದ  ವಿಘ್ನೇಶ್ವರ ಭಟ್ ಹಾಗೂ ಸುಶಿಲಾ ಭಟ್ ದಂಪತಿಯ ಪುತ್ರನಾದ ಸತೀಶ, ಚಿಕ್ಕಂದಿನಿಂದಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ಈಗ ಅಭೂತಪೂರ್ವ ಯಶಸ್ಸು ಗಳಿಸಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಯಾವುದೇ ಭವ್ಯ ಆರ್ಥಿಕ ಹಿನ್ನೆಲೆ ಅಥವಾ ಮಹಾನಗರಗಳ ದುಬಾರಿ ಕೋಚಿಂಗ್ ಇಲ್ಲದಿದ್ದರೂ, ಕೇವಲ ಕಠಿಣ ಪರಿಶ್ರಮ, ಅಚಲ ವಿಶ್ವಾಸ ಮತ್ತು ದಿನದ ನಿರಂತರ ಅಧ್ಯಯನದ ಮೂಲಕ ಮೊದಲ ಯತ್ನ ರಲ್ಲೇ ಸಿಎ ಪದವಿ ಮುಡಿಗೇರಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೇರಣೆ:
ಸಾಮಾನ್ಯವಾಗಿ ಸಿಎ ಪರೀಕ್ಷೆ ಎಂದರೆ ಕೇವಲ ನಗರ ಪ್ರದೇಶದ ಅಥವಾ ಖಾಸಗಿ ಕಾನ್ವೆಂಟ್ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ ಎಂಬ ಭ್ರಮೆಯಿದೆ. ಆದರೆ, ಸತೀಶ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಗಿಸಿ ಈ ಮಟ್ಟದ ಯಶಸ್ಸು ಸಾಧಿಸುವ ಮೂಲಕ, “ಕಲಿಯುವ ಚಲವಿದ್ದರೆ ಶಾಲೆಯ ಭಿನ್ನತೆ ಸಾಧನೆಗೆ ಅಡ್ಡಿಯಾಗುವುದಿಲ್ಲ” ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹರಿದುಬಂದ ಪ್ರಶಂಸೆಗಳ ಮಹಾಪೂರ:
ಗ್ರಾಮೀಣ ಭಾಗದ ಬಡತನ ಮತ್ತು ಸೌಲಭ್ಯಗಳ ಕೊರತೆಯ ನಡುವೆಯೂ ದೇಶ ಮಟ್ಟದ ಪರೀಕ್ಷೆಯಲ್ಲಿ ಮಿಂಚಿದ ಸತೀಶ ಅವರ ಸಾಧನೆಗೆ ಸಾರ್ವಜನಿಕರಿಂದ, ಇಡಗುಂದಿ ಭಾಗದ ಜನರಿಂದ ಹಾಗೂ ವಿವಿಧ ಗಣ್ಯರಿಂದ ವ್ಯಾಪಕ ಪ್ರಶಂಸೆ ಮತ್ತು ಅಭಿನಂದನೆಗಳು ಹರಿದುಬರುತ್ತಿವೆ. ಇವರ ಈ ಸಾಧನೆ ಮಲೆನಾಡಿನ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ಕಾಣಲು ದೊಡ್ಡ ಪ್ರೇರಣೆಯಾಗಿದೆ.

Leave a Reply

Your email address will not be published. Required fields are marked *