ಸರ್ಕಾರ ರೂಪಿಸುವ ಯೋಜನೆಗಳು ಕೇವಲ ಕಾಗದದಲ್ಲಿ ಉಳಿಯದೆ, ಅದರ ಸೌಲಭ್ಯ ಕೊನೆಯ ಹಳ್ಳಿಯಲ್ಲಿರುವ ಅರ್ಹ ವ್ಯಕ್ತಿಗೂ ತಲುಪಬೇಕು : ಭೀಮಣ್ಣ ..!!!

ಹಂಚಿಕೊಳ್ಳಿ

ಶಿರಸಿ: ವಿವಿಧ ಇಲಾಖೆಯಲ್ಲಿ ನೌಕರರ ಕೊರತೆ ಇದ್ದರೂ ಅದನ್ನು ಬದಿಗೊತ್ತಿ, ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಪರಿಗಣಿಸಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ನಗರದ ಡಾ.ಬಿ.ಆರ್‌.ಅಂಬೇಡ್ಕರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿರಸಿ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡ ಶಿರಸಿ ತಾಲೂಕು ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸರ್ವ ಸದಸ್ಯರ ಸಭೆ 2026 ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ರೂಪಿಸುವ ಯೋಜನೆಗಳು ಕೇವಲ ಕಾಗದದಲ್ಲಿ ಉಳಿಯದೆ, ಅದರ ಸೌಲಭ್ಯ ಕೊನೆಯ ಹಳ್ಳಿಯಲ್ಲಿರುವ ಅರ್ಹ ವ್ಯಕ್ತಿಗೂ ತಲುಪಿದಾಗಲೇ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಸರ್ಕಾರ ಮತ್ತು ಜನರ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ಸೇವಾ ಮನೋಭಾವದಿಂದ ನಿರ್ವಹಿಸಿದರೆ ಆಡಳಿತ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಹೆಚ್ಚುತ್ತದೆ ಎಂದರು.
ಜನರು ಸರ್ಕಾರಿ ಕಚೇರಿಗೆ ಬಂದಾಗ ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ, ನಿಯಮಾನುಸಾರ ಸಕಾಲದಲ್ಲಿ ಪರಿಹರಿಸುವುದು ನೌಕರರ ಜವಾಬ್ದಾರಿಯಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರರ ಪ್ರಾಮಾಣಿಕ ಸೇವೆ ಅತ್ಯಗತ್ಯ. ಹಗಲು ರಾತ್ರಿಯನ್ನದೇ ಜನರ ಕೆಲಸ ನಿರ್ವಹಿಸುವುದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಅಭಿವೃದ್ಧಿಗೆ ಹಣ ಮಂಜೂರು ಮಾಡಬಹುದು. ಅದನ್ನು ಸರಿಯಾಗಿ ವಿನಿಯೋಗವಾಗಲು ನೌಕರರು ಪ್ರಮುಖ ಕಾರಣೀಕರ್ತರು. ನೌಕರರ ಸಹಾಯದಿಂದ ರಾಜ್ಯ ಸರ್ಕಾರಿ ಪಂಚ ಗ್ಯಾರೆಂಟಿಯು ನಗರದಿಂದ ಹಿಡಿದು ಕಟ್ಟ ಕಡೆಯ ವ್ಯಕ್ತಿಗೆ ತಲುಪಿದೆ. ಜಿಲ್ಲಾಧ್ಯಕ್ಷರ ಬೇಡಿಕೆಯಂತೆ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ 30 ಲಕ್ಷ ರೂ. ಅನುದಾನ ನೀಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿರಸಿ ಜಿಲ್ಲಾ ಶಾಖೆಯ ಅಧ್ಯಕ್ಷ ಕಿರಣಕುಮಾರ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ವಿರುದ್ಧದ ಸಂಘಟನೆಯಲ್ಲ. ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದರ ಜತೆಗೆ ನೌಕರರ ಹಿತಾಸಕ್ತಿ, ಸಾರ್ವಜನಿಕರ ಹಿತ ಮತ್ತು ಸರ್ಕಾರದ ಗೌರವವನ್ನು ಎತ್ತಿ ಹಿಡಿಯುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ಸರ್ಕಾರಿ ನೌಕರರ ಸಂಘದಲ್ಲಿ 40 ಇಲಾಖೆಗಳ ನೌಕರರು ಸದಸ್ಯರಾಗಿದ್ದಾರೆ. ನೌಕರರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ, ಅವುಗಳಿಗೆ ಪರಿಹಾರ ದೊರಕಿಸುವುದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಧ್ಯೇಯವಾಗಿದೆ. ಸರ್ಕಾರ ನೀಡಿರುವ ಜವಾಬ್ದಾರಿಯನ್ನು ನೌಕರರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ಸಂಘವೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸರ್ಕಾರಿ ನೌಕರರ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರನ್ನು ಗೌರವಿಸಿ ಪ್ರೋತ್ಸಾಹಿಸುವುದು ಸಂಘದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಸಂಘ ಮುಂದಾಗಿದೆ. ನೌಕರರಿಗೆ ನಿರಂತರವಾಗಿ ವಿವಿಧ ಆ್ಯಪ್‌ಗಳ ಮೂಲಕ ಕೆಲಸದ ಒತ್ತಡ ಹೆಚ್ಚುತ್ತಿರುವುದು ತೀವ್ರ ಸಮಸ್ಯೆಯಾಗಿದೆ. ನಿರಂತರ ಆ್ಯಪ್ ಆಧಾರಿತ ಕೆಲಸವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದರೂ, ಇದರಿಂದ ನೌಕರರಿಗೆ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರಿ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ರೂ.30 ಲಕ್ಷ ಅನುದಾನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಪ್ರೇರಣಾ ನುಡಿಗಳನ್ನಾಡಿ, ನಶ್ವರವಾದ ಬದುಕನ್ನು ಜೀವನದ ಮೌಲ್ಯಗಳನ್ನು ಅರಿತು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು. ಸಮಾಜದಲ್ಲಿರುವ ವ್ಯವಸ್ಥೆಯನ್ನು ಪರಿವರ್ತಿಸುವ ಶಕ್ತಿ ನಮ್ಮಲ್ಲಿದೆ. ಶಿಕ್ಷಣ, ಕ್ರೀಡೆ, ಸಂಗೀತ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಗುರಿಯೊಂದಿಗೆ ಬದುಕನ್ನು ಮುಡುಪಾಗಿಡಬೇಕು. ಸಾಧನೆಯ ಹಾದಿಯಲ್ಲಿ ಬಡತನ, ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವಗಳು ಅಡ್ಡಿಯಾಗಬಾರದು. ಇಂತಹ ಎಲ್ಲ ಮಿತಿಗಳನ್ನು ದೂರವಿಟ್ಟು, ಆತ್ಮವಿಶ್ವಾಸ ಹಾಗೂ ಛಲದೊಂದಿಗೆ ಸಾಧನೆಯತ್ತ ಮುನ್ನಡೆಯಬೇಕು ಎಂದರು.
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು.
ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷೆ ಸುಮಾ ಉಗ್ರಾಣಕರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಭುವನೇಶ್ವರಿ ಪಾಟೀಲ, ಉಪ ಖಜಾನೆ ಸಹಾಯಕ ನಿರ್ದೇಶಕ ಪ್ರದೀಪ ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಮಾರುತಿ ಉಪ್ಪಾರ, ಸಿದ್ದಾಪುರ ತಾಲೂಕಾಧ್ಯಕ್ಷ ಸತೀಶ ಹೆಗಡೆ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಡಿ.ನಾಯ್ಕ, ಮತ್ತಿತರರು ಇದ್ದರು. ಜಿಲ್ಲಾ ಕಾರ್ಯದರ್ಶಿ ಡಿ.ಪಿ.ಹೆಗಡೆ ಸ್ವಾಗತಿಸಿದರು. ಶಿಕ್ಷಕ ಉದಯ ಭಟ್ಟ ಸಂಗಡಿಗರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ರೇಣುಖಾ ಬಾಳೆಹೊಸೂರ ಮತ್ತು ದಿವಾಕರ ಮರಾಠಿ ನಿರೂಪಿಸಿದರು.

ಕೋಟ್‌:
ಸರ್ಕಾರದ ಆಶಯಗಳು ಹಾಗೂ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೂ ಗೌರವ ಬರುತ್ತದೆ.
-ಭೀಮಣ್ಣ ನಾಯ್ಕ, ಶಾಸಕ

Leave a Reply

Your email address will not be published. Required fields are marked *