ಯಲ್ಲಾಪುರ: ಭಾರತ್ ಜೋಡೋ ಯುವ ಸಂಘದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸಂಘಟಿಸಿ, ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಪರಿಣಾಮಕಾರಿಯಾಗಿ ಕಟ್ಟುವ ಅಗತ್ಯವಿದೆ ಎಂದು ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಯಲ್ಲಾಪುರ ಪಟ್ಟಣದ ಕಾರ್ಯಾಲಯದಲ್ಲಿ ಗುರುವಾರ ನಡೆದ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ಪ್ರಮುಖ ನಾಯಕರ ಮತ್ತು ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ್ ಜೋಡೋ ಹಾಗೂ ಎಸ್‌ಐಆರ್‌ನ 2ನೇ ಹಂತದ ಕಾರ್ಯ ಚಟುವಟಿಕೆಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಯುವ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸದಸ್ಯರ ನೋಂದಣಿ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಮಾತನಾಡಿ, ಭಾರತ್ ಜೋಡೋ ಯುವ ಸಂಘದ ರಚನೆ, ಸಂಘಟನೆಯ ಮೂಲ ಉದ್ದೇಶ ಹಾಗೂ ಸದಸ್ಯರ ನೋಂದಣಿ ಪ್ರಕ್ರಿಯೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಯುವಜನರನ್ನು ಪಕ್ಷದೊಂದಿಗೆ ಸಕ್ರಿಯವಾಗಿ ಜೋಡಿಸುವುದು, ತಳಮಟ್ಟದಲ್ಲಿ ಪಕ್ಷದ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಯುವಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಕುರಿತು ಅವರು ಸಭೆಗೆ ವಿವರಿಸಿದರು.
ಈ ಪ್ರಮುಖ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಸ್. ಭಟ್, ಕೃಷ್ಣ ಹಿರೇಹಳ್ಳಿ, ಗಣಪತಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಭಟ್, ಡಾ. ರವಿ ಭಟ್ ಬರಗದ್ದೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎಂ. ನಾಯ್ಕ, ಪ್ರಚಾರ ಸಮಿತಿ ಅಧ್ಯಕ್ಷರಾದ ದ್ಯಾಮಣ್ಣ ದೊಡ್ಮನಿ, ನರಸಿಂಹ ನಾಯ್ಕ, ಕೆ.ಸಿ. ಗಲಭಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಹಿಂದುಳಿದ ವರ್ಗಗಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಪ್ರೇಮಾನಂದ ನಾಯ್ಕ ಮತ್ತು ನಗರ ಘಟಕ ಸಮಿತಿ ಅಧ್ಯಕ್ಷರಾದ ಸತೀಶ್ ನಾಯ್ಕ ಸೇರಿದಂತೆ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು, ಘಟಕಾಧ್ಯಕ್ಷರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.














Leave a Reply