ಕಳಚೆ ಗ್ರಾಮದಲ್ಲಿ ಕಳಚದ ಬೂಟಿನ ಹಠ:  ಕತ್ತಿ ಹಿಡಿದು ಅಬ್ಬರಿಸಿದ ‘ಸ್ಟೈಲಿಶ್’ ಅಸಾಮಿಗಳು!”??

ಹಂಚಿಕೊಳ್ಳಿ

ಯಲ್ಲಾಪುರ: ನಾಗರಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ತೋಟದಲ್ಲಿ ಪೂಜೆ ನಡೆಯುತ್ತಿದ್ದ ಸ್ಥಳದಲ್ಲಿ ಬೂಟು ಧರಿಸಿ ಬಂದಿದ್ದನ್ನು ಆಕ್ಷೇಪಿಸಿದ ಒಂದೇ ಕಾರಣಕ್ಕೆ ಇಬ್ಬರು ಸೇರಿ ತಂದೆ ಮತ್ತು ಮಗಳ ಮೇಲೆ ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕಳಚೆ ಗ್ರಾಮದ ಸೂಣಜೋಗಕೇರಿ ನಡೆದಿದೆ ಎಂದು ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡ ತಂದೆ ಉಮಾಕಾಂತ ಬಾಬು ಕಳಸ (58) ಹಾಗೂ ಅವರ ಮಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಆಗಸ್ಟ್ 26 ರಂದು ಬೆಳಗ್ಗೆ ಕಳಚೆ ಗ್ರಾಮದ ಉಮಾಕಾಂತ ಕಳಸ ಅವರು ತಮ್ಮ ತೋಟದಲ್ಲಿ ಪೂಜಾ ಸಾಮಗ್ರಿಗಳನ್ನು ಹಿಡಿದುಕೊಂಡು ನಿಂತಿದ್ದರು. ಈ ವೇಳೆ ಅದೇ ಗ್ರಾಮದ ರಾಜೇಶ ಅನಂತ ಹೆಗಡೆ (30) ಮತ್ತು ಅನಂತ ಸಾಂಬಾ ಹೆಗಡೆ (58) ಎಂಬುವವರು ಇವರ ಮನೆಯ ಬಳಿ ಬಂದಿದ್ದಾರೆ. ಈ ಹಿಂದೆ ನಾಗರಪಂಚಮಿ ಹಬ್ಬದ ದಿನ ಬಾವಿಗೆ ನೀರು ಹಾಕಿದ ವಿಷಯವಾಗಿ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.ಆದರೆ, ಇಂದು ಬೆಳಗ್ಗೆ ರಾಜೇಶ ಹೆಗಡೆ ಪೂಜಾ ಸ್ಥಳಕ್ಕೆ ಬೂಟು ಧರಿಸಿಕೊಂಡು ಬಂದಿರುವುದನ್ನು ಗಮನಿಸಿದ ಉಮಾಕಾಂತ ಅವರು, “ಇವತ್ತು ಪೂಜೆಯ ದಿನ, ಬೂಟು ಹಾಕಿಕೊಂಡು ಬರಬಾರದಿತ್ತು” ಎಂದು ಸೌಮ್ಯವಾಗಿ ಹೇಳಿದ್ದಾರೆ. ಇದೇ ಮಾತನ್ನು ನೆಪವಾಗಿಸಿಕೊಂಡ ಆರೋಪಿಗಳು ತೀವ್ರ ಆಕ್ರೋಶಗೊಂಡು ಗಲಾಟೆ ಆರಂಭಿಸಿದ್ದಾರೆ.


“ನನಗೆ ಬೂಟು ಹಾಕಬೇಡ ಎಂದು ಹೇಳಲು ನೀನ್ಯಾರು?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜೇಶ ಹೆಗಡೆ, ತಕ್ಷಣವೇ ತಾನು ತಂದಿದ್ದ ಕತ್ತಿಯಿಂದ ಉಮಾಕಾಂತ ಅವರ ಹೊಟ್ಟೆಯ ಭಾಗಕ್ಕೆ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ಜೀವ ರಕ್ಷಿಸಿಕೊಳ್ಳಲು ಉಮಾಕಾಂತ ಅವರು ಕತ್ತಿಯನ್ನು ಕೈಯಿಂದ ತಡೆದಾಗ, ಅವರ ಎರಡೂ ಕೈಗಳಿಗೆ ಹಾಗೂ ಎಡಬುಜಕ್ಕೆ ತೀವ್ರ ರಕ್ತಗಾಯಗಳಾಗಿವೆ. ತಂದೆಯ ಕಿರುಚಾಟ ಕೇಳಿ ಆತನನ್ನು ರಕ್ಷಿಸಲು ಓಡಿಬಂದ ಮಗಳ ಮೇಲೂ ಆರೋಪಿ ಅನಂತ ಹೆಗಡೆ ಕತ್ತಿಯಿಂದ ಹಲ್ಲೆ ಮಾಡಿದ್ದು, ಆಕೆಯ ಎರಡು ಬೆರಳುಗಳು ಕತ್ತರಿಸಿ ತೀವ್ರ ರಕ್ತಸ್ರಾವವಾಗಿದೆ.


ಗಲಾಟೆಯ ಶಬ್ದ ಕೇಳಿ ಸ್ಥಳೀಯರಾದ ಕಾಶಿನಾಥ ಕಳಸ ಹಾಗೂ ಶ್ರೀನಾಥ ಕಳಸ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಆರೋಪಿಗಳ ಕೈಯಿಂದ ತಂದೆ-ಮಗಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಜನ ಸೇರುತ್ತಿದ್ದಂತೆ ಆರೋಪಿಗಳು “ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆಯ ನಂತರ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರಿನ ಅನ್ವಯ ಯಲ್ಲಾಪುರ ಠಾಣೆಯ ಪಿ.ಎಸ್.ಐ ಮಹಾವೀರ ಕಾಂಬಳೆ ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಕಠಿಣ ಕಲಂಗಳಡಿ (ಕಲಂ 329(3), 118(2), 351(2), 352, 3(5)) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಬ್ಬದ ದಿನವೇ ನಡೆದ ಈ ರಕ್ತಪಾತ ಕಳಚೆ ಗ್ರಾಮದಲ್ಲಿ ತೀವ್ರ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *