ಶಿರಸಿ: ಬನವಾಸಿ ಹೋಬಳಿಯನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಆಗ್ರಹಿಸಿ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಟರಾಜ ಬಿ ಹೊಸೂರು ನೇತೃತ್ವದಲ್ಲಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ಮಳೆಯ ತೀವ್ರ ಅಭಾವದಿಂದ ತಾಲೂಕಿನ ಪೂರ್ವಭಾಗದ ಕೃಷಿ ಕುಟುಂಬಗಳಿಗೆ ಕೃಷಿ ಮಾಡಲು ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಯಲ್ಲಿ ಬಹಳ ಹಿನ್ನೆಡೆಯಾಗಿದ್ದು, ರೈತರು ಸಾಲ ಮಾಡಿ ಬೀತ್ತನೆ ಬೀಜ, ರಸಗೊಬ್ಬರಗಳನ್ನು ಖರೀದಿಸಿಬಿತ್ತನೆ ಮಾಡಿದ್ದಾರೆ. ಬೆಳೆಗಳು ಕೈಗೆ ಸಿಗುವುದು ಅನುಮಾನವಾಗಿದೆ. ನಮ್ಮ ಭಾಗದಲ್ಲಿ ವಾಡಿಕೆಗಿಂತ ಭಾರಿ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ನೀರಾವರಿ ಸೌಲಭ್ಯವಿಲ್ಲದ ಕಾರಣ ರೈತರು ಮಳೆ ನೀರನ್ನೇ ನಂಬಿ ಕೃಷಿ ಚಟುವಟಿಕೆಗಳನ್ನು ಮಾಡಬೇಕಿದೆ. ಅಡಿಕೆ, ಭತ್ತ, ಅನಾನಸ್, ಜೋಳ, ಬಾಳೆ, ಹೀಗೆ ವಿಭಿನ್ನ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಈ ವರ್ಷದ ಅನಾವೃಷ್ಟಿಯಿಂದ ರೈತರ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಬರಗಾಲದಿಂದ ಕಂಗೆಟ್ಟು ರೈತರು ಆತ್ಮಹತ್ಯೆಗೆ ಶರಣಾಗುವ ಮುನ್ನ ರೈತರ ಸಾಲಮನ್ನಾ ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರದಿಂದ ಆಗಬೇಕಿದೆ ಹಾಗೂ ಬೆಳೆ ನಷ್ಟದ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಹಾಯಕ ಆಯುಕ್ತ ಚಂದ್ರಶೇಖರ.ಆರ್.ಜಿ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದರು.
ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ಪುಟ್ಟಗೌಡ್ರು, ನಿರ್ದೇಶಕರಾದ ದೇವರಾಜ ನಾಯ್ಕ ರಾಮಪುರ, ನಾಗರಾಜ ಯಾಲಕ್ಕಿ ದಾಸನಕೊಪ್ಪ, ರಾಜಶೇಖರ ಗೌಡ ಸಂತೊಳಿ, ಪ್ರಭುಗೌಡ ಕಾಳಂಗಿ, ಕುಮಾರ ಗೌಡ ಅಂಡಗಿ, ದೇವರಾಜ ವದ್ದಲ, ಗೌರಾಜಿ ಗೌಡ್ರು ಕುಪ್ಪಗಡ್ಡೆ, ಶೈಲಜಾ ರಂಗಾಪುರ ಹಾಗೂ ಬನವಾಸಿ ಹೋಬಳಿಯ ಸಮಸ್ತ ರೈತರು ಇದ್ದರು.













Leave a Reply