ಯಲ್ಲಾಪುರ ಸಮೀಪ ಅಪಾಯಕಾರಿ ಮೆಥನಾಲ್ ಟ್ಯಾಂಕರ್ ಪಲ್ಟಿ : ತಪ್ಪಿದ ಭಾರಿ ಅನಾಹುತ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ   ಮೆಥನಾಲ್ ರಾಸಾಯನಿಕ ತುಂಬಿದ್ದ ಬೃಹತ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ರವಿವಾರ ಮಧ್ಯಾನ್ನ   ನಡೆದಿದೆ. ಈ ಲಾರಿಯು ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.

ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಟ್ಯಾಂಕರ್, ತದನಂತರ ಪಕ್ಕದ ಚರಂಡಿಗೆ ಉರುಳಿದೆ. ವಾಹನದಲ್ಲಿದ್ದ ಮೆಥನಾಲ್  ರಾಸಾಯನಿಕವಾಗಿದ್ದು,ಪ್ಲಾಸ್ಟಿಕ್, ಪ್ಲೈವುಡ್ ಮತ್ತು ಸಿಂಥೆಟಿಕ್ ಬಟ್ಟೆಗಳ ತಯಾರಿಕೆಯಲ್ಲಿ ಬಳಸುವ ಫಾರ್ಮಾಲ್ಡಿಹೈಡ್ ಮತ್ತು ಅಸಿಟಿಕ್ ಆಮ್ಲವನ್ನು ಉತ್ಪಾದಿಸಲು ಇದು ಮುಖ್ಯ ಕಚ್ಚಾ ವಸ್ತುವಾಗಿದೆ.

ಅದನ್ನು ಪ್ಲಾಸ್ಟಿಕ್, ಮಸಿ, ಸುಗಂಧದ್ರವ್ಯಗಳ ತಯಾರಿಕೆಗೆ ಬಳಸಲಾಗುತ್ತದೆ . ಅದು ಸೋರಿಕೆಯಾದರೆ, ವಿಷಕಾರಿ ಹಾಗೂ ಬೇಗ ಅಗ್ನಿಯನ್ನು ಸೇಳೆಯುವ ರಾಸಾಯನಿಕ ವಸ್ತು ಎನ್ನಲಾಗಿದ್ದು ಆವಿಯಾಗಿ ಗಾಳಿಯಲ್ಲಿ ಸೇರುವ ಆತಂಕವಿತ್ತು ಎನ್ನಲಾಗಿದೆ.

ಸೋಮವಾರ ಸ್ಥಳಕ್ಕೆ  ಕ್ರೇನ್‌ಗಳನ್ನು ತರಿಸಿ, ತೀವ್ರ ಜಾಗ್ರತೆಯಿಂದ ಪಲ್ಟಿಯಾಗಿದ್ದ ಟ್ಯಾಂಕರ್ ಅನ್ನು ಯಶಸ್ವಿಯಾಗಿ ಮೇಲಕ್ಕೆತ್ತಲಾಯಿತು.

ರಾಸಾಯನಿಕದ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸುವ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಓಡಾಟವನ್ನು ಪೂರ್ಣವಾಗಿ ನಿಷೇಧಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಲ್ಪ  ದೂರದವರೆಗೆ  ವಾಹನಗಳು ಸಾಲುಗಟ್ಟಿ ನಿಂತು, ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು ಎನ್ನಲಾಗಿದೆ.

ಯಲ್ಲಾಪುರ ಠಾಣೆಯ ಪಿಎಸ್‌ಐ ಸಿದ್ದು ಗುಡಿ ಅವರು ಖುದ್ದಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಇಡೀ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು. ಕ್ರೇನ್ ಮೂಲಕ ಟ್ಯಾಂಕರ್ ಅನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿದ ನಂತರವೇ ಹೆದ್ದಾರಿಯಲ್ಲಿ ಎಂದಿನಂತೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.


Leave a Reply

Your email address will not be published. Required fields are marked *