
ಯಲ್ಲಾಪುರ: ನಮ್ಮ ಭಾರತೀಯ ಪರಂಪರೆಯಲ್ಲಿಯೇ ಅನಾದಿ ಕಾಲದಿಂದಲೂ ಸಂಸ್ಕಾರಯುಕ್ತ ಆಹಾರ-ವಿಹಾರ, ಜೀವನಶೈಲಿ ಇತ್ತು. ಹಾಗಾಗಿಯೇ ಆಸ್ಪತ್ರೆಗೆ ಹೋಗುವ ಸ್ಥಿತಿ ಇರಲಿಲ್ಲ. ಇಂದು ಆಧುನಿಕ ಶೈಲಿ, ಪಾಶ್ಚಾತ್ಯ ಅನುಕರಣೆಯಿಂದ ಮನೆಯಲ್ಲಿ ಕನಿಷ್ಠ ಒಬ್ಬಿಬ್ಬರಾದರೂ ಆಸ್ಪತ್ರೆಗೆ ಹೋಗಬೇಕಾಗಿದೆ. ಇದು ವಿಪರ್ಯಾಸದ ಸ್ಥಿತಿ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಭಾನುವಾರ ಥ್ಯಾಂಕ್ ಯು ಯೂನಿವರ್ಸ್ ಅಕಾಡೆಮಿ, ಆರ್ಟ್ ಆಫ್ ಲಿವಿಂಗ್ ಯಲ್ಲಾಪುರ, ಮಹಾಗಣಪತಿ ಕಲಾಬಳಗ ಹುತ್ಕಂಡ ಕ್ರಾಸ್ ಇವರ ಸಹಯೋಗದಲ್ಲಿ ಶುದ್ಧ ಕುಂಕುಮ ತಯಾರಿಕೆ ಮನೆಯಲ್ಲೇ ಮಾಡುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಾಶ್ಚಿಮಾತ್ಯ ಸಂಸ್ಕೃತಿ ಸಂಪೂರ್ಣವಾಗಿ ನಮ್ಮನ್ನು ಆವರಿಸಿದೆ. ಮಾಧ್ಯಮಗಳಲ್ಲಿ ಬರುವ ಒಳ್ಳೆಯದನ್ನು ಬಿಟ್ಟು ನಮ್ಮ ಬದುಕಿಗೆ ಮಾರಕವಾದ ಚಿಂತನೆ, ಯೋಚನೆಗಳನ್ನು ಸ್ವೀಕರಿಸುತ್ತಿದ್ದೇವೆ. ಹಳೆಯದರ ಮಹತ್ವವನ್ನು ಅರಿಯದೇ ಗೊಡ್ಡು ಸಂಪ್ರದಾಯ ಎಂದು ಭಾವಿಸಿ, ಮುಂದುವರಿದ ಪರಿಣಾಮವೇ ನಮ್ಮ ಸ್ಥಿತಿ ಇಲ್ಲಿಗೆ ಬಂದು ತಲುಪಿದೆ. ನಮ್ಮ ಹಳೆಯ ಸಂಪ್ರದಾಯ ಉಳಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಬೇಕು ಎಂದರು.
ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಮಾತನಾಡಿ,ನಮ್ಮ ಹಳೆಯ ಎಲ್ಲ ಸಂಪ್ರದಾಯಗಳು ವೈಜ್ಞಾನಿಕತೆಯ ಹಿನ್ನೆಲೆಯಲ್ಲೇ ಇವೆ. ಹಾಗಾಗಿಯೇ ಋಷಿಮುನಿಗಳು ಶಾಸ್ತ್ರ ಎಂದು ಮಾಡಿದ್ದು, ಅದನ್ನು ಪರಿಪಾಲಿಸುತ್ತಾರೆಂಬ ಉದ್ದೇಶದಿಂದ. ನಿಸರ್ಗಕ್ಕೆ, ಪರಿಸರಕ್ಕೆ, ಪ್ರಕೃತಿಗೆ ಪೂರಕವಾದ ಬದುಕು ನಮ್ಮದಾಗಬೇಕು. ಆಗ ಮಾತ್ರ ನಮ್ಮ ಆರೋಗ್ಯ ಸಾಧ್ಯ ಎಂದರು.
ಯೋಗ ಫೆಡರೇಷನ್ ಆಫ್ ಇಂಡಿಯಾದ ತಾಲೂಕಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಪಾಲಕರ ಅದರಲ್ಲೂ ಮಾತೆಯರ ಉದಾಸೀನತೆಯೇ ಹೆಣ್ಣುಮಕ್ಕಳು ಕುಂಕುಮ, ಬಳೆ ಹಚ್ಚದೇ ಇರುವುದ್ಕೆ ಕಾರಣವಾಗಿದೆ. ಬಳೆ, ಕುಂಕುಮ, ಮೂಗುತಿ, ಕಿವಿಗೆ ಬಂಗಾರದ ಆಭರಣ, ಕುತ್ತಿಗೆಗೆ ಹೀಗೆ ವಿವಿಧೆಡೆ ಶರೀರದ ಬೇರೆ ಬೇರೆ ಭಾಗಗಳಲ್ಲಿ ನಾವು ತೊಡುವ ಬೆಳ್ಳಿ-ಬಂಗಾರದ ಧಾತು ಸ್ಪರ್ಶದಿಂದ ಆರೋಗ್ಯಕ್ಕೆ ಪೂರಕ ಎಂಬುದನ್ನು ವೈಜ್ಞಾನಿಕತೆ ಒಪ್ಪಿದೆ. ಹಣೆಗೆ ಕುಂಕುಮ ಹಚ್ಚುವುದರಿಂದ ಮನಸ್ಸು ಸರಿ ದಾರಿಯಲ್ಲಿ ಸಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ಕಾಣಬಹುದು. ಆ ದೃಷ್ಟಿಯಲ್ಲಿ ಕುಂಕುಮ ತಯಾರಿಕೆ ಶಿಬಿರ ಮಾದರಿಯಾಗಿದೆ. ಪಟ್ಟಣದಲ್ಲಿ ದೊರೆಯುವ ರಾಸಾಯನಿಕಯುಕ್ತ ಕುಂಕುಮವನ್ನು ಬಳಸದೇ ಇದ್ದರೆ ಆರೋಗ್ಯಕ್ಕೆ ಪೂರಕವಾಗುತ್ತದೆ ಎಂದರು.
ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ, ನಮ್ಮ ಶರೀರದಲ್ಲಿ ಮೂಲಾಧಾರ ಸೇರಿದಂತೆ ಏಳು ಚಕ್ರಗಳಿರುತ್ತವೆ. ಔಷಧಿ ರಹಿತ ಜೀವನಕ್ಕೆ ನಾವು ನಿತ್ಯವೂ ಯೋಗ ಸಾಧನೆಯಿಂದ ಉತ್ತಮ ಜೀವನ ನಿರ್ವಹಿಸಬಹುದು. ಸಣ್ಣ ಮಕ್ಕಳಿಗೆ ರಾಮಾಯಣ, ಭಾರತ ಪರೀಕ್ಷೆಗಳ ಮೂಲಕ ಸಂಸ್ಕಾರ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಹಿರಿಯರಿಗೆ ಬಿಪಿ, ಶುಗರ್ ಅಣ್ಣತಮ್ಮ ಇದ್ದಂತೆ. ಇದನ್ನು ನಿರ್ವಹಿಸಬಹುದು, ಬಾರದಂತೆ ನೋಡಿಕೊಳ್ಳಲು ಯೋಗವೊಂದೇ ಪರಿಹಾರ ಎಂದರು.
ಸಾಮಾಜಿಕ ಕಾರ್ಯಕರ್ತೆ ವೀಣಾ ಯಲ್ಲಾಪುರಕರ್ ಉಪಸ್ಥಿತರಿದ್ದರು. ಕಲಾಕಾರ ಸಂತೋಷ ಗುಡಿಗಾರ ಮನೆಯಲ್ಲೇ ಶುದ್ಧ ಕುಂಕುಮ ತಯಾರಿಯ ಕುರಿತು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯ ಗಣ್ಯರು ಥ್ಯಾಂಕ್ ಯು ಯೂನಿವರ್ಸ್ ಅಕಾಡೆಮಿಯ ಬ್ರೌಶರನ್ನು ಬಿಡುಗಡೆಗೊಳಿಸಿದರು. ನಿರ್ಮಲಾ ಭಾಗ್ವತ ಪ್ರಾರ್ಥಿಸಿದರು.. ಥ್ಯಾಂಕ್ ಯು ಯೂನಿವರ್ಸ್ ಅಕಾಡೆಮಿ ಮುಖ್ಯಸ್ಥ ಚಂದ್ರಶೇಖರ ಭಟ್ಟ ಹುತ್ಕಂಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಶಿಕ್ಷಕ ಸದಾನಂದ ದಬಗಾರ ನಿರ್ವಹಿಸಿದರು.













Leave a Reply