
ಯಲ್ಲಾಪುರ: ಗ್ರಾಮೀಣ ಭಾಗದ ಜನರು ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ರವಿ ಹುಳ್ಸೆ ಹೇಳಿದರು.
ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಸೇವಾಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣು ತಪಾಸಣೆ ಮತ್ತು ಕನ್ನಡಕ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, ಗ್ರಾಮದ ಜನರು ಕಣ್ಣಿನ ಸಮಸ್ಯೆಗಳಿಂದ ದೂರವಿರಲು ಈ ಶಿಬಿರವು ಉತ್ತಮ ಅವಕಾಶವಾಗಿದ್ದು, ಪ್ರತಿಯೊಬ್ಬರೂ ಇದರ ಲಾಭ ಪಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಪಂದನ ಸೇವಾ ಟ್ರಸ್ಟ್ (ರಿ) ಹಡಿನಬಾಳ ಇದರ ಪ್ರಮುಖರಾದ ಗಣಪತಿ ಹೆಗಡೆ ಹಡಿನಬಾಳ ಮಾತನಾಡಿ “ಒನ್ ಸೈಟ್ ಎಸ್ಸಿಲಾರ್ ಲಕ್ಸೊಟ್ಟಿಕಾ ಫೌಂಡೇಶನ್ (ರಿ) ಪ್ರಾಯೋಜಿತ ಸಹಕಾರದೊಂದಿಗೆ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಾದ್ಯಂತ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ದೃಷ್ಟಿದೋಷದಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಸಂಸ್ಥೆಯ ಮೂಲಕ ಈಗಾಗಲೇ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಮಲವಳ್ಳಿಯಲ್ಲಿ ನಡೆಯುತ್ತಿರುವುದು ನಮ್ಮ ಜಿಲ್ಲೆಯ ೬೫ನೇ ಶಿಬಿರವಾಗಿದೆ. ಈ ಬಹುರಾಷ್ಟ್ರೀಯ ಕಂಪನಿಯು ಜಗತ್ತಿನಾದ್ಯಂತ ವಿವಿಧ ಎನ್ಜಿಒಗಳ (NGO) ಸಹಭಾಗಿತ್ವದಲ್ಲಿ ಇಂತಹ ನಿರಂತರ ಸೇವಾ ಕಾರ್ಯಗಳನ್ನು ಮಾಡುತ್ತಿದೆ,” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದೀಪಕ ಭಟ್ಟ ಶಿಗೇಕೇರಿ , “ಹಳ್ಳಿಯ ಜನರು ಸಾಮಾನ್ಯವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ನಗರದ ವೈದ್ಯಕೀಯ ಸಂಸ್ಥೆಗಳು ದೂರವಿರುವುದು ಮತ್ತು ದುಬಾರಿ ವೆಚ್ಚಗಳು ಜನರು ಆಸ್ಪತ್ರೆಗೆ ಹೋಗಲು ಹಿಂಜರಿಯುವಂತೆ ಮಾಡಿವೆ. ಈ ಉಚಿತ ಶಿಬಿರವು ನಮ್ಮ ಪಂಚಾಯತ್ ವ್ಯಾಪ್ತಿಯ ಕಣ್ಣಿನ ಸಮಸ್ಯೆ ಇರುವ ಜನರಿಗೆ ಬಹಳ ಉಪಕಾರಿಯಾಗಲಿದೆ. ನಮ್ಮ ಮನವಿಗೆ ಸ್ಪಂದಿಸಿ ಈ ಶಿಬಿರ ಆಯೋಜಿಸಿರುವುದಕ್ಕೆ ಟ್ರಸ್ಟ್ಗೆ ಧನ್ಯವಾದಗಳನ್ನು ಅರ್ಪಿಸಿದರು.
ಶಿಬಿರ ಸಂಯೋಜಕರಲ್ಲಿ ಒಬ್ಬರಾದ ಯುನೈಟೆಡ್ ಪಿಕ್ಸ್ ಫೌಂಡೇಷನ್ ನ ಪ್ರಮುಖರಾದ ಕುಮಾರ ಕೆ. ಹೆಗಡೆ ಹಾಗೂ ಸ್ಪಂದನ ಟ್ರಸ್ಟ್ ನ ಗಣಪತಿ ಹೆಗಡೆ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಸದಾನಂದ ಭಟ್ಟ, ಶಿಬಿರ ಸಹ ಸಂಯೋಜಕ ಯುನೈಟೆಡ್ ಪಿಕ್ಸ್ ಸಂಸ್ಥೆಯ ಮಾಲಕ ಕುಮಾರ ಕೆ. ಹೆಗಡೆ, ಶಿವರಾಮ ಎನ್ ಭಟ್ಟ, ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಭಟ್ಟ, ಹಿರಿಯರಾದ ನಾರಾಯಣ ಭಟ್ಟ ಕಂಚಿಮನೆ ವೇದಿಕೆಯಲ್ಲಿ ಇದ್ದರು.
ನಂತರ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಅಧಿಕ ಜನ ಕಣ್ಣಿನ ತಪಾಸಣೆಗೆ ಒಳಗಾದರು.
ನೇತ್ರ ಪರೀಕ್ಷಕ ಸಂತೋಷ್ ರವರು ಎಲ್ಲರನ್ನೂ ಪರೀಕ್ಷಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಗಣಪತಿ ಕುಣಬಿ ನೀರಕ್ಲು,
ರತ್ನಾಕರ ಆಚಾರಿ, ಮೋಹಿತ್ ಗಾಂವ್ಕರ್ ಸೂಲಮನೆ,
ಗಣಪತಿ ಭಟ್ಟ ಮಲವಳ್ಳಿ ಉಪಸ್ಥಿತರಿದ್ದು ಅಗತ್ಯ ಸಹಕಾರ ನೀಡಿದರು.














Leave a Reply