
ಹೊನ್ನಾವರ: ಇಲ್ಲಿನ ಬಂದರು ರಸ್ತೆಯ ಬದಿಯಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹೊನ್ನಾವರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ-2 ನಿವಾಸಿ ಮಹಮ್ಮದ ಅಲ್ತಾಫ್ ಸುಲೇಮಾನ ಬೆಟ್ಕುಳಿಕರ (30) ಎಂದು ಗುರುತಿಸಲಾಗಿದೆ. ಬಂಧಿತನಿಂದ ಅಂದಾಜು 6000 ಮೌಲ್ಯದ 116 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ:
ದಿನಾಂಕ 18-08-2026 ರಂದು ಸಂಜೆ ಸುಮಾರು 6:00 ಗಂಟೆಯ ವೇಳೆಗೆ ಹೊನ್ನಾವರ ನಗರದ ಮಹಾಲಕ್ಷ್ಮಿ ಗ್ಯಾಸ್ ಗೋದಾಮಿನ ಹತ್ತಿರವಿರುವ ಬಂದರು ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪಂಚರ ಸಮ್ಮುಖದಲ್ಲಿ ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ ಕಾಸರಕೋಡಿನ ತೌಹೀದ್ ಕಾಸಿಮ್ ಬುಡ್ಡೆ ಹಾಗೂ ಹೊನ್ನಾವರದ ನಾಗರಾಜ ಆಚಾರಿ ಎಂಬುವವರು ತನಗೆ ಗಾಂಜಾ ಪೂರೈಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ 1985 ರ ಕಲಂ 8(ಸಿ) ಮತ್ತು 20(ಬಿ)(2)(ಎ) ಅಡಿಯಲ್ಲಿ ಪ್ರಕರಣ (ಗುನ್ನೆ ನಂ: 179/2026) ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪಿ.ಐ ಶ್ರೀ ಸಿದ್ದರಾಮೇಶ್ವರ ಅವರ ನೇತೃತ್ವದಲ್ಲಿ, ಪಿ.ಎಸ್.ಐ ಗಳಾದ ಮಹಾಂತೇಶ ವಾಲ್ಮೀಕಿ, ಮಂಜುನಾಥ ಸಿಬ್ಬಂದಿಗಳಾದ ಮನೋಜ ಡಿ, ರವಿ ನಾಯ್ಕ, ಅಬ್ದುಲ್ ಹಮೀದ್ ಶೇಖ್, ಮಧುಕರ ಕರಿಗಾರ್ ಹಾಗೂ ಮಂಜುನಾಥ ಕೊಂತಿಕಲ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ಹೊನ್ನಾವರ ಠಾಣೆಯ ಇಡೀ ತಂಡವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.













Leave a Reply