ಗೌರಿ ಭತ್ತದ ತಳಿ ನಾಟಿ ಮಾಡುವ ಮೂಲಕ ಹುಲ್ಕುತ್ರಿ ಶಾಲಾ ಮಕ್ಕಳ ಕೃಷಿ ಅಧ್ಯಯನ

ಹಂಚಿಕೊಳ್ಳಿ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ‘ನಿಸರ್ಗ ಇಕೋ ಕ್ಲಬ್’ ಅಡಿಯಲ್ಲಿ ಬುಧವಾರ ಸಾಂಪ್ರದಾಯಿಕ ಗದ್ದೆನಾಟಿ ಮಾಡುವ ಮೂಲಕ ಪ್ರಾಯೋಗಿಕ ಕೃಷಿ ಅಧ್ಯಯನ ನಡೆಸಿದರು.
ಶಾಲೆಯ ಸಮೀಪದ ಹೇಮಜೆನಿ ಗ್ರಾಮದ ಲೋಕೇಶ ಪದ್ಮನಾಭ ಗೌಡ ಅವರ ಗದ್ದೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಭಾಗದ ಸಾಂಪ್ರದಾಯಿಕ ಹಾಗೂ ಪ್ರಸಿದ್ಧ ಭತ್ತದ ತಳಿಯಾದ ‘ಗೌರಿ’ ಸಸಿಗಳನ್ನು ವಿದ್ಯಾರ್ಥಿಗಳು ನಾಟಿ ಮಾಡಿದರು. ಹಿರಿಯರಾದ ಗೋವಿಂದ ಗಿರಿಯಾ ಗೌಡ ಹಾಗೂ ಗದ್ದೆಯ ಮಾಲೀಕ ಲೋಕೇಶ ಪದ್ಮನಾಭ ಗೌಡ ಅವರು ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿಗಳ ಕೃಷಿ ಅಧ್ಯಯನ ಚಟುವಟಿಕೆಗೆ ಚಾಲನೆ ನೀಡಿದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ನಿತ್ಯಾನಂದ ಗೌಡ ಹಾಗೂ ಶ್ವೇತಾ ಲೋಕೇಶ ಗೌಡ ಅವರು ಮಕ್ಕಳಿಗೆ ಭತ್ತದ ಸಸಿ ನಾಟಿ ಮಾಡುವ ಸೂಕ್ತ ವಿಧಾನ ಮತ್ತು ಸಸಿಗಳ ನಡುವೆ ಇರಬೇಕಾದ ನಿಗದಿತ ಅಂತರದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಅಂದಾಜು 4 ಗುಂಟೆ ವಿಸ್ತೀರ್ಣದ ಗದ್ದೆಯಲ್ಲಿ ಶಾಲೆಯ 4 ರಿಂದ 7ನೇ ತರಗತಿಯ 22 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ಕೇವಲ ಒಂದೂವರೆ ಗಂಟೆಯಲ್ಲಿ ನಾಟಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಮ್ಮ ಕೃಷಿ ಕೌಶಲ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ದರ್ಶನ ಹರಿಕಾಂತ್, ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ನಿತ್ಯಾನಂದ ಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *