
ಯಲ್ಲಾಪುರ : ಮಾವಿನಮನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ ದೇಶದ 80ನೇ ಸ್ವಾತಂತ್ರೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಬ್ಬಣ್ಣ ಬೊಳ್ಮನೆ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ರಾಷ್ಟ್ರಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ ಯಶಸ್ವಿ 80 ವರ್ಷಗಳು ಸಂದಿವೆ. ಈ ಸುದೀರ್ಘ ಪಯಣದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕ, ತಾಂತ್ರಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ನಮ್ಮ ದೇಶ ಹೊರಹೊಮ್ಮಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯವಾಗಿದೆ” ಎಂದು ತಿಳಿಸಿದರು.


ಮುಂದುವರಿದು ಮಾತನಾಡಿದ ಅವರು, “ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯವು ಸುಲಭವಾಗಿ ಬಂದಿದ್ದಲ್ಲ. ದೇಶದ ವಿಮೋಚನೆಗಾಗಿ ಸಹಸ್ರಾರು ಮಹನೀಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ಮಹಾತ್ಮರ ಬಲಿದಾನ, ದೇಶಪ್ರೇಮ ಮತ್ತು ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಸದಾ ಸ್ಮರಿಸಬೇಕು. ಕೇವಲ ಹಬ್ಬದಂತೆ ಆಚರಿಸದೆ, ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ. ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿರುವ ಸಹಕಾರಿ ಸಂಸ್ಥೆಗಳು ಇಂತಹ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ಜನರಲ್ಲಿ ಒಗ್ಗಟ್ಟು ಮತ್ತು ದೇಶಭಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ” ಎಂದು ಹರ್ಷ ವ್ಯಕ್ತಪಡಿಸಿದರು.



ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರವಿ ಹುಳ್ಸೆ , ಮಾಜಿ ಗ್ರಾ.ಪಂ ಅಧ್ಯಕ್ಷ, ಸಂಘದ ಸದಸ್ಯರಾದ ಸುಬ್ಬಣ್ಣ ಕುಂಟೆಗಾಳಿ, ಸಂಘದ ಸದಸ್ಯರಾದ ಮಾಚಣ್ಣ ವರನಮನೆ, ಗಣಪತಿ ಭಟ್ ಗೋಪನಪಾಲ್ ಹಿರಿಯ ಸಹಕಾರಿಗಳಾದ ಸದಾನಂದ ಭಟ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ದತ್ತಾತ್ರೇಯ ಗಾಂವ್ಕರ್ ನೆಲೆಪಾಲ್, ಗ್ರಾಮ ಮಂಚಾಯತ ಅಭಿವೃದ್ಧಿ ಅಧಿಕಾರಿ ಗಂಗಾಧರ ಭಟ್ , ಗ್ರಾಮ ಲೆಕ್ಕಾಧಿಕಾರಿ ಈಶ್ವರ ಪಟಗಾರ ಹಾಗೂ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಸಹಕಾರಿ ಬಂಧುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ಮಕ್ಕಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಿಹಿ ಹಂಚುವಿಕೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.















Leave a Reply