ಪೊಲೀಸರಿಗೆ ಚಾಕು ಇರಿದ ರೌಡಿಗಳು!!! ನೋಡಿ ಈ ವರದಿ

ಹಂಚಿಕೊಳ್ಳಿ

ಭಟ್ಕಳ : ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವನ್ನು ಶಮನ ಮಾಡಲು ತೆರಳಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಯುವಕನ ಮೇಲೆ ರೌಡಿಶೀಟರ್ ಹಾಗೂ ಆತನ ಸಹಚರರು ಚಾಕುವಿನಿಂದ ಭೀಕರವಾಗಿ ದಾಳಿ ನಡೆಸಿರುವ ಘಟನೆ ಮುರುಡೇಶ್ವರದಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಹವಲ್ದಾರ್ ಸಂಗಪ್ಪ ಮತ್ತು ಕಾನ್‌ಸ್ಟೇಬಲ್ ವಿನಾಯಕ್ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿರುವ ಸ್ಥಳೀಯ ಯುವಕ ಮನೋಜ್‌ಗೆ ಮುರುಡೇಶ್ವರದ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗಿದೆ.
ಘಟನೆಯ ಹಿನ್ನೆಲೆ:
ಶನಿವಾರ ತಡರಾತ್ರಿ ಮುರುಡೇಶ್ವರದ ಪ್ರಮುಖ ಕಮಾನಿನ ಬಳಿ ರೌಡಿಶೀಟರ್ ರಾಜು ಹಾಗೂ ಆತನ ತಂಡ ಮನೋಜ್ ಎಂಬಾತನೊಂದಿಗೆ ಜಗಳವಾಡುತ್ತಿದ್ದರು. ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಾದ ಸಂಗಪ್ಪ ಹಾಗೂ ವಿನಾಯಕ್ ಶೆಟ್ಟಿ ತಕ್ಷಣ ಸ್ಥಳಕ್ಕೆ ಆಗಮಿಸಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಸಿಬ್ಬಂದಿ ಹಾಗೂ ಯುವಕನಿಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ತನಿಖೆ ತೀವ್ರ:
ಕೃತ್ಯ ಎಸಗಿದ ರಾಜು, ರಿತಿಕ್, ಮದನ್ ನಾಯ್ಕ್, ಯೋಗೇಶ್ ಹಾಗೂ ದರ್ಶನ್ ಎಂಬುವವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿಶೀಟರ್ ರಾಜು ಮತ್ತು ಮನೋಜ್‌ನನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *