ಯಲ್ಲಾಪುರ: ತಾಲೂಕಿನ ಇಡಗುಂದಿ – ಚಿನ್ನಾಪುರ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿ ಬಸ್ಸೊಂದು ಕಳೆದ ಒಂದು ವಾರದಿಂದ ಹಾಳಾಗಿ ನಿಂತಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರಯಾಣಿಕರ ಕಣ್ಣು ತಪ್ಪಿಸಿದ ಬಸ್:
ಆನಂದ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಬಸ್ ಚಿನ್ನಾಪುರ ಬಸ್ ನಿಲ್ದಾಣದ ಎದುರಲ್ಲೇ ಕೆಟ್ಟು ನಿಂತಿದೆ. ಬಸ್ ನಿಲ್ದಾಣದ ಮುಂಭಾಗವನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿರುವುದರಿಂದ, ನಿಲ್ದಾಣದೊಳಗೆ ಕುಳಿತಿರುವ ಪ್ರಯಾಣಿಕರಿಗೆ ರಸ್ತೆಯಲ್ಲಿ ಇತರ ಬಸ್ಸುಗಳು ಬರುವುದು ಮತ್ತು ಹೋಗುವುದು ಕಾಣದಂತಾಗಿದೆ. ಇದರಿಂದಾಗಿ ಅನೇಕರು ನಿಗದಿಗಿಂತ ಮುಂಚೆಯೇ ಬಸ್ಸುಗಳನ್ನು ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಹೆದ್ದಾರಿಗೂ ತಟ್ಟಿದ ಬಿಸಿ:
ಈ ಬಸ್ ನಿಂತಿರುವ ಜಾಗವು ಕೇವಲ ರಾಷ್ಟ್ರೀಯ ಹೆದ್ದಾರಿಗೆ ಮಾತ್ರವಲ್ಲದೆ, ಚಿನ್ನಾಪುರ ಕ್ರಾಸ್ನಿಂದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೈಗಾ ರಾಜ್ಯ ಹೆದ್ದಾರಿಯಿಂದ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆಯುವ ಪ್ರಮುಖ ಜಂಕ್ಷನ್ನಲ್ಲೇ ಈ ಬಸ್ ಇರುವುದರಿಂದ ಇತರೆ ವಾಹನ ಸವಾರರ ದೃಷ್ಟಿಗೆ ಅಡ್ಡಿಯಾಗುತ್ತಿದೆ.
ಅಪಘಾತದ ಭೀತಿ:
ವಾಹನ ದಟ್ಟಣೆ ಹೆಚ್ಚಿರುವ ಈ ತಿರುವಿನಲ್ಲಿ ಬಸ್ ನಿಂತಿರುವುದು ದೊಡ್ಡ ಅಪಘಾತಕ್ಕೆ ಮುಕ್ತ ಆಹ್ವಾನ ನೀಡುವಂತಿದೆ. ಕಳೆದ ಮೂರ್ನಾಲ್ಕು ದಿನ ಕಳೆದರೂ ಬಸ್ ಮಾಲೀಕರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇದನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡ ಅವಾಂತರ ಸಂಭವಿಸುವ ಮುನ್ನವೇ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಈ ಬಸ್ಸನ್ನು ತಕ್ಷಣವೇ ರಸ್ತೆಯಿಂದ ತೆರವುಗೊಳಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.














Leave a Reply