ಶಾಸಕರ ವಿರುದ್ಧದ ಹೋರಾಟವಲ್ಲ, ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ವಿರುದ್ಧದ ಹೋರಾಟ: ಅನಂತಮೂರ್ತಿ ಹೆಗಡೆ

ಹಂಚಿಕೊಳ್ಳಿ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರ ಕುರಿತು ತಾನು ಯಾವುದೇ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದ್ದಾರೆ.

“ನನಗೆ ಭೀಮಣ್ಣ ನಾಯ್ಕ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಅವರು ಶಾಸಕರಾಗಿರುವ ಕಾರಣದಿಂದ ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡಿದ್ದೇನೆ ಹೊರತು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ. ನನ್ನ ಹೋರಾಟ ವ್ಯಕ್ತಿಯ ವಿರುದ್ಧವಲ್ಲ, ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ವಿರುದ್ಧ. ನನ್ನ ಮಾತು ತಪ್ಪು ಎಂದು ಸಾಬೀತಾದರೆ ಜನರ ಮುಂದೆ ಉತ್ತರಿಸಲು ನಾನು ಸಿದ್ಧನಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

ಭೀಮಣ್ಣ ನಾಯ್ಕ ಅಭಿಮಾನಿ ಬಳಗ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಆರೋಪಿಸಿದ ಅವರು, “ನಾನು ಡಾಕ್ಟರ್‌ರನ್ನು ಅವಮಾನಿಸುವ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಾತುಗಳನ್ನು ತಿರುಚಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ” ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಮಾಡುವ ಹಕ್ಕು ಹೊಂದಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆಗಳ ಕುರಿತು ಧ್ವನಿ ಎತ್ತಿರುವುದು ಜನರ ಹಿತದೃಷ್ಟಿಯಿಂದ ಮಾತ್ರ ಎಂದು ಹೇಳಿದರು.

ಭವಿಷ್ಯದಲ್ಲಿ ನಾನು ಎಲ್ಲೆ ಹೋರಾಟ ಮಾಡಿದರೂ ಅಲ್ಲಿಯೇ ಬಂದು ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದ್ದೀರಿ. ನೀವೇನು “ರಿಪಬ್ಲಿಕ್ ಆಫ್ ಶಿರಸಿ ” ಮಾಡಲು ಹೋರಟಿದ್ದಾರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟವನ್ನು ಮಾಡುವುದು ವಿರೋಧ ಪಕ್ಷದವರ ಹಕ್ಕು ಶಾಸಕರಿಗೆ ಆಸ್ಪತ್ರೆಯ ಕುರಿತು ಮಾತನಾಡುವ “ನೈತಿಕ ತಾಕತ್ತು” ಇದೆಯೇ ಎಂದು ಪ್ರಶ್ನೆ ಮಾಡಿದ್ದೇನೆಯೇ ಹೊರತು ತೋಳಿನ ತಾಕತ್ತು, ಅಥವಾ ದುಡ್ಡಿನ ತಾಕತ್ತನ್ನು ಪ್ರಶ್ನಿಸಿಲ್ಲ. ಆದರೆ ತಿರುಚಿ ನನ್ನ ಜಾತಿಯನ್ನು, ಸಮಾಜವನ್ನು ಹುಟ್ಟನ್ನು ಪ್ರಶ್ನಿಸಿ ಬೇದರಿಕೆ ಹಾಕುವ ರೀತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ. ಭೀಮಣ್ಣ ನಾಯ್ಕ ಅಭಿಮಾನಿ ಬಳಗದವರು ನನ್ನ ಹವ್ಯಕ ಜಾತಿಯ ಬಗ್ಗೆ ಮಾತನಾಡಿದ್ದು ತೀವ್ರ ನೋವಾಗಿದೆ ಎಂದರು,

ಶಿರಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು, 24×7 ತುರ್ತು ಚಿಕಿತ್ಸಾ ವ್ಯವಸ್ಥೆ, ವೆಂಟಿಲೇಟರ್ ಸೌಲಭ್ಯ, ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ನೇಮಕ ಸೇರಿದಂತೆ ಜನರಿಗೆ ಅಗತ್ಯವಾದ ಆರೋಗ್ಯ ಸೇವೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯ ಅವ್ಯವಸ್ಥೆಯಿಂದ ಮೃತಪಟ್ಟ ಮಿಥುನ್ ನಾಯ್ಕ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದು, ನೆರವು ನೀಡುವುದು ಹಾಗೂ ಸರ್ಕಾರದಿಂದ ಪರಿಹಾರಕ್ಕಾಗಿ ಆಗ್ರಹಿಸುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ನಾನು ಬಡವರ ಪರವಾಗಿ ಧ್ವನಿ ಎತ್ತುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

“ನನ್ನ ಜಾತಿ, ಸಮಾಜದ ಕುರಿತು ಮಾತನಾಡಿ ನನ್ನ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಜನರ ಸಮಸ್ಯೆಗಳ ಕುರಿತು ಪ್ರಶ್ನಿಸುವುದು ನನ್ನ ಹಕ್ಕು ಮತ್ತು ಜವಾಬ್ದಾರಿ. ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ವಿಚಾರಗಳ ಬಗ್ಗೆ ನನ್ನ ಹೋರಾಟ ಮುಂದುವರಿಯಲಿದೆ” ಎಂದು ಅನಂತಮೂರ್ತಿ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *