ಭಗವದ್ಗೀತೆಯ ಬಗ್ಗೆ ಸ್ವರ್ಣವಲ್ಲಿ ಶ್ರೀ ಗಳು ಏನಂದ್ರು ನೋಡಿ ಈ ವರದಿ

ಹಂಚಿಕೊಳ್ಳಿ

ಶಿರಸಿ: ಮನುಷ್ಯತ್ವದ ಉಳಿವು, ನೆಮ್ಮದಿಯ ಜೀವನ ಹಾಗೂ ಬದುಕಿನ ಸಾರ್ಥಕತೆಗೆ ಧರ್ಮ ಅತ್ಯಗತ್ಯ. ಧರ್ಮದ ನೈಜ ಅರ್ಥವನ್ನು ಅರಿತು ಆಧ್ಯಾತ್ಮಿಕ ಬದುಕು ಕಟ್ಟಿಕೊಳ್ಳಲು ಭಗವದ್ಗೀತೆ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು.
ಅವರು ಭಾನುವಾರ ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಸುಧರ್ಮಾ ಸಭಾಭವನದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಅಂತರ್ಜಾಲ ತರಗತಿಯ ಮೊದಲನೇ ಹಂತದ ಸಮರ್ಪಣಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.


ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ. ಬದುಕಿನ ದಾರಿ ದೀಪವಾಗಿದೆ. ಜೀವನದಲ್ಲಿ ಧರ್ಮ ಇರಬೇಕು, ಧರ್ಮಕ್ಕೆ ಆಧ್ಯಾತ್ಮಿಕತೆ ಅಗತ್ಯ, ಆ ಆಧ್ಯಾತ್ಮಿಕತೆಯ ಮೂಲವೇ ಭಗವದ್ಗೀತೆ ಎಂದರು.
ಧರ್ಮವಿಲ್ಲದ ಮನುಷ್ಯ ಪಶುತ್ವದ ಮಟ್ಟಕ್ಕೆ ಇಳಿಯುತ್ತಾನೆ. ಆಹಾರ, ನಿದ್ರೆ ಮತ್ತು ಭಯ ಎಂಬ ಪ್ರವೃತ್ತಿಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿದ್ದರೂ, ಧರ್ಮಾಚರಣೆಯೇ ಮನುಷ್ಯನನ್ನು ಶ್ರೇಷ್ಠನನ್ನಾಗಿಸುತ್ತದೆ ಎಂದು ಹೇಳಿದರು.
ಮಹಾಭಾರತವು ನೀತಿ ಮತ್ತು ಧರ್ಮಸೂಕ್ಷ್ಮಗಳನ್ನು ಒಳಗೊಂಡ ಮಹಾಗ್ರಂಥವಾಗಿದ್ದು, ಅದರ ಸಾರಸ್ವತರೂಪವೇ ಭಗವದ್ಗೀತೆ. ಧರ್ಮದ ಮರ್ಮ ಆಧ್ಯಾತ್ಮಿಕತೆಯಲ್ಲಿದೆ. ಸಮಾಜದಲ್ಲಿ ಧರ್ಮ ಕ್ಷೀಣಿಸಿದಾಗ ಭಗವಂತ ಅವತರಿಸಿ ಧರ್ಮಸ್ಥಾಪನೆ ಮಾಡುತ್ತಾನೆ. ಆದಿ ಶಂಕರಾಚಾರ್ಯರೂ ಇದೇ ಉದ್ದೇಶದಿಂದ ಜನರನ್ನು ಜಾಗೃತಿಗೊಳಿಸಿದರು ಎಂದರು
ಭಗವದ್ಗೀತೆಯಲ್ಲಿ ಪೂಜೆಯ ಕುರಿತು ಇಲ್ಲ ಎಂಬ ಆರೋಪ ಕೇಳಿಬರುತ್ತದೆ. ಆದರೆ ಪೂಜೆಯ ನಿಜವಾದ ಮರ್ಮವನ್ನು ಗೀತೆಯೇ ತಿಳಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಆರಾಧ್ಯ ದೇವರ ಮೇಲೆ ಶ್ರದ್ಧೆ ಬೆಳೆಸಿಕೊಳ್ಳಬೇಕು. ಶ್ರದ್ಧೆ, ಭಕ್ತಿ ಹಾಗೂ ವಿಶ್ವವನ್ನೇ ದೇವಾಲಯವಾಗಿ ಕಾಣುವ ದೃಷ್ಟಿಯನ್ನು ಭಗವದ್ಗೀತೆ ನೀಡುತ್ತದೆ ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ಕುಟುಂಬ ವ್ಯವಸ್ಥೆ ಛಿದ್ರವಾಗುತ್ತಿದ್ದು, ವಿವಾಹ ವಿಚ್ಛೇದನ, ಮತಾಂತರ, ಉಗ್ರವಾದ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ಶಂಕರ ಭಟ್ಟ ಬಾಲಿಗದ್ದೆ, ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಕಳೆದ ವರ್ಷದ ವಿಜಯದಶಮಿಯಿಂದ ಭಗವದ್ಗೀತೆಯ ಅಂತರ್ಜಾಲ ತರಗತಿಗಳನ್ನು ಆರಂಭಿಸಲಾಗಿದೆ. ಶುದ್ಧ ಉಚ್ಚಾರಣೆ, ಸ್ಪಷ್ಟ ಧ್ವನಿ ಹಾಗೂ ರಾಗಬದ್ಧ ಪಠಣದ ಮೂಲಕ ವಿದ್ಯಾರ್ಥಿಗಳಿಗೆ ಕಂಠಪಾಠ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ 71 ತರಗತಿಗಳಲ್ಲಿ 1,697 ವಿದ್ಯಾರ್ಥಿಗಳಿಗೆ 140 ಪ್ರಶಿಕ್ಷಕರ ಮೂಲಕ ಅಂತರ್ಜಾಲದ ಮೂಲಕ ಭಗವದ್ಗೀತೆ ಬೋಧಿಸಲಾಗುತ್ತಿದೆ. ಇದುವರೆಗೆ 13 ಬ್ಯಾಚ್‌ಗಳ 348 ವಿದ್ಯಾರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಆಸಕ್ತರ ತರಗತಿ ಮುಂದುವರೆಯಲಿದೆ ಎಂದರು.
ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ವಿದೂಷಿ ರಾಧಾ ದೇಸಾಯಿ, ಸವಿತಾ ಜೋಶಿ, ಸರಸ್ವತಿ ಮಾರಿಗೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೇಂದ್ರ ಮಾತೃಮಂಡಳಿಯ ವೇದಾ ಹೆಗಡೆ ನೀರ್ನಳ್ಳಿ ನಿರೂಪಿಸಿದರು. ಸವಿತಾ ಜೋಶಿ ವಂದಿಸಿದರು.
ಭಗವದ್ಗೀತೆ ತರಗತಿಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪ್ರಶಿಕ್ಷಕರನ್ನು ಶ್ರೀಗಳು ಫಲ-ಮಂತ್ರಾಕ್ಷತೆ ನೀಡಿ ಗೌರವಿಸಿದರು. ಅಂತರ್ಜಾಲ ಅಧ್ಯಯನದ ಅನುಭವ ಕುರಿತು ಚಿನ್ಮಯ ಕೆರೆಗದ್ದೆ, ಭಾಗೀರಥಿ ಜೋಶಿ, ರೇಖಾ ಲಕ್ಷ್ಮಣ, ನೇತ್ರಾವತಿ ಹೆಗಡೆ ಕೆಂಚಗದ್ದೆ ಮತ್ತಿತರರು ಅಭಿಪ್ರಾಯ ಹಂಚಿಕೊಂಡರು.


ಇಂದಿನ ಯುವಜನತೆ ಭೋಗ ಜೀವನದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಜಾದಿನಗಳನ್ನು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಿಡುವ ಮನೋಭಾವ ಕಡಿಮೆಯಾಗುತ್ತಿದೆ. ಗೃಹಿಣಿಯರು ಕುಟುಂಬದ ಜವಾಬ್ದಾರಿಯನ್ನು ಗಂಭೀರವಾಗಿ ನಿಭಾಯಿಸುವ ಮೂಲಕ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು. ಯುವ ಸಮುದಾಯದಲ್ಲಿ ಧರ್ಮದ ಅರಿವನ್ನು ಮೂಡಿಸಬೇಕು. ಅದರ ಮೂಲಕ ಅವರ ಮನಸ್ಸನ್ನು ಧರ್ಮಾಚರಣೆ ಕಡೆಗೆ ಕೇಂದ್ರೀಕರಿಸಬೇಕು. ಅದಕ್ಕೆ ಭಗವದ್ಗೀತೆ ಅತ್ಯುತ್ತಮ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.


ಭಗವದ್ಗೀತೆ ಪಠಣದಿಂದ ಪುಣ್ಯ ದೊರೆಯುತ್ತದೆ. ಅದನ್ನು ವೈಯಕ್ತಿಕ ಜೀವನದಲ್ಲೂ ನಿರಂತರವಾಗಿ ಅನುಸರಿಸಿದಾಗ ಸಮಾಜದಲ್ಲಿನ ಅಜ್ಞಾನ ಎಂಬ ಕತ್ತಲೆ ದೂರವಾಗಿ ಜ್ಞಾನದ ಬೆಳಕು ಹರಡುತ್ತದೆ. ಭಗವದ್ಗೀತೆಯ ಅರಿವು ಮತ್ತು ಜಾಗೃತಿ ನಿರಂತರವಾಗಿ ವಿಸ್ತರಿಸಬೇಕು.

  • ಸ್ವರ್ಣವಲ್ಲೀ ಶ್ರೀ

Leave a Reply

Your email address will not be published. Required fields are marked *