ಉತ್ತರಕನ್ನಡ ಹಾಗೂ ರಾಜ್ಯದ ಹವಮಾನ ವರದಿ ಮಳೆನಾ?? ರಜೆನಾ ??

ಹಂಚಿಕೊಳ್ಳಿ


ರಘುರಾಮ ಕಂಪದಕೋಡಿ.

ಕರಾವಳಿ ಮಲೆನಾಡಿನ ಜಿಲ್ಲೆಗಳಲ್ಲಿ ನಿನ್ನೆ ಸಾಮಾನ್ಯ ಮಳೆಯಾಗಿದೆ. ಆಗುಂಬೆ ಸುತ್ತಮುತ್ತ, ಬೆಳ್ತಂಗಡಿ ತಾಲ್ಲೂಕಿನ ಘಟ್ಟಪ್ರದೇಶಗಳಲ್ಲಿ ಅಧಿಕ ಮಳೆಯಾಗಿತ್ತು. ವಿಜಯನಗರ ಬೆಳಗಾವಿ ಕಲ್ಬುರ್ಗಿ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದೆ. ದ.ಕ ಉಡುಪಿ ಉ.ಕ ಕಾಸರಗೋಡು ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ – ನಾಳೆ ಮುಂಜಾನೆ ತನಕ ತುಂತುರು ಅಥವಾ ಆಗಾಗ ಸಾಮಾನ್ಯ ಮಳೆ ಮುಂದುವರೆಯಲಿದೆ. ಕರಾವಳಿ ತೀರದ ತಾಲ್ಲೂಕುಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಬಂಗಾಳ ಕೊಲ್ಲಿಯ ವಾಯುಭಾರಕುಸಿತದ ನಂತರ ಎರಡು ವಾರ ಸಾಧಾರಣ ಮುಂಗಾರು ಮಳೆ ಮುಂದುವರೆಯಲಿದ್ದು ಕರಾವಳಿ ಜಿಲ್ಲೆಗಳಲ್ಲಿ ಪ್ರತಿದಿನ 20-50mm ಸರಾಸರಿ ಮಳೆ ಮುಂದುವರೆಯಬಹುದು.

ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಹಾಸನ ಕೊಡಗು ಜಿಲ್ಲೆಗಳ ಕರಾವಳಿಗೆ ಸಮೀಪದ ಘಟ್ಟಪ್ರದೇಶಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಮೋಡ – ಅಲ್ಲಲ್ಲಿ ಸಣ್ಣ ಮಳೆಯಾಗಬಹುದು. ಕರಾವಳಿಯಲ್ಲಿ ಮಳೆ ಮುಂದುವರೆದಷ್ಟು ದಿನ ಘಟ್ಟಪ್ರದೇಶಗಳಲ್ಲಿಯೂ ಸಾಮಾನ್ಯ ಮಳೆ ಮುಂದುವರೆಯಬಹುದು.

ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾಗಷಃ ಮೋಡ ಬರಲಿದ್ದು ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು. ಈ ವಾಯುಭಾರಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇವತ್ತಿನ ಪ್ರಕಾರ ಕಡಿಮೆ.

ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ವಾಯುಭಾರಕುಸಿತದ ಪ್ರಭಾವದಿಂದ ಮೋಡ ಬರಲಿದ್ದು ಹೆಚ್ಚಿನ ಪ್ರದೇಶಗಳಲ್ಲಿ ತುಂತುರು -ಸಣ್ಣ ಮಳೆಯಾಗಬಹುದು.

ಬಂಗಾಳಕೊಲ್ಲಿಯ ವಾಯುಭಾರಕುಸಿತವು ಪಶ್ಚಿಮದತ್ತ ಚಲಿಸಿ ಆಗಸ್ಟ್ 1 ರ ಅಂದಾಜು ಗುಜರಾತ್ ಗೆ ತಲುಪುವ ಸಾಧ್ಯತೆ ಇದೆ. ಇದರಿಂದಾಗಿ ಭಾರತದಲ್ಲಿ ಮತ್ತೆ ಮುಂಗಾರು ಚುರುಕಾಗಲಿದ್ದು ಪೂರ್ವ, ಮಧ್ಯ ಭಾರತ, ಗುಜರಾತ್, ಮಹಾರಾಷ್ಟ್ರ ಕೊಂಕಣ ತೀರ, ಕೇರಳ – ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 3 ತನಕ ಸಾಧಾರಣ ಮಳೆ ಮುಂದುವರೆಯಬಹುದು.

Leave a Reply

Your email address will not be published. Required fields are marked *