ನರಸಿಂಹ, ಕೃಷ್ಣ  , ನಾಗೇಂದ್ರ ಮೂವರು ಅಕ್ಷರ ಸಾಧಕರಿಗೆ ಸನ್ಮಾನದ ಗೌರವ….

ಹಂಚಿಕೊಳ್ಳಿ

ಯಲ್ಲಾಪುರ : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯ ಪ್ರಯುಕ್ತ 21 ರಂದು  ಮೂರು ಜನ ಸಾಧಕರನ್ನು ಗೌರವಿಸಿ ಸನ್ಮಾನಿಸಲಿದೆ.  ಪತ್ರಕರ್ತ, ಕೃಷಿಕ, ಪರಿಸರದ ಉಳಿವಿಗಾಗಿ ಸದಾ ಕಾರ್ಯೋನುಖರಾಗಿರುವ ನರಸಿಂಹ ಸಾತೊಡ್ಡಿ, ಪತ್ರಕರ್ತ ಕೆ. ಎಸ್. ಭಟ್. ಹಾಗೂ ಬರಹಗಾರ ,ವ್ಯಂಗ್ಯ ಚಿತ್ರಕಾರ, ಪ್ರಕಾಶಕ, ಕೃಷಿಕ, ನಾಗೇಂದ್ರ ಯಲ್ಲಾಪುರ ಅವರಿಗೆ ಸನ್ಮಾನ ನಡೆಯಲಿದೆ.  

ಸಾಧರಕ ಸಾಧನೆಯನ್ನೊಮ್ಮೆ  ನೋಡಿ ಬರೋಣ

ಅಜಾತಶತ್ರು ನರಸಿಂಹ ಸಾತೋಡ್ಡಿ

ಅಜಾತ ಶತ್ರು  ನರಸಿಂಹ ಸಾತೊಡ್ಡಿ
ಮೂಲ ಸೌಕರ್ಯಗಳೇ ಇಲ್ಲದ ಸಾತೊಡ್ಡಿ ಎಂಬ ಕಾಳಿ ದಡದ ಕುಗ್ರಾಮದಲ್ಲಿ ಬಾಲ್ಯವನ್ನು‌ ಕಳೆದು , ಈಗ ಬೇಡ್ತಿ ತಟದ ಸಾಸ್ಮೆಗದ್ದೆ ಯಲ್ಲಿ ಅವರ ಬದುಕಿನ ಗೋಪುರ ಕಟ್ಟಿಕೊಂಡು ಸಾತೊಡ್ಡಿ ಎಂಬ ನಾಮಾಂಕಿತ ಹೆಸರಿನಲ್ಲಿ ಜಿಲ್ಲೆಯಲ್ಲಿ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಒಂದು‌ ಮೈಲಿಗಲ್ಲಾಗಿದ್ದಾರೆ. ಪತ್ರಿಕೋದ್ಯಮ, ಸಾಮಾಜಿಕ, ಸಹಕಾರ, ಶೈಕ್ಷಣಿಕ, ಹೀಗೆ ವಿವಿಧ ಮಜಲುಗಳಲ್ಲಿ ಕೆಲಸ ಮಾಡಿದ ಅವರು ಕಾಲೇಜು ಮೆಟ್ಟಿಲು ಏರುತ್ತಿದ್ದಂತೆ ೧೯೮೯ ರ ಅವಧಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಮೂರುವರೆ ದಶಕಗಳಿಂದ ನಿರಂತರವಾಗಿ ಪತ್ರಿಕೋದ್ಯಮದಲ್ಲೇ ಜನರ ನಾಡಿಯಾಗಿದ್ದಾರೆ. ನಾಡಿನ ಶ್ರೇಷ್ಠ ಪತ್ರಿಕೆಗಳಾದ ಹೊಸದಿಗಂತ, ಧ್ಯೇಯನಿಷ್ಠ ಪತ್ರಕರ್ತ,ವಕನ್ನಡಪ್ರಭ, ವಿಜಯವಾಹಿನಿ, ಉಷಾಕಿರಣ ನಂತರ ಕಳೆದ ೨೧ ವರ್ಷದಿಂದ ಉದಯವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ಜೊತೆಗೆ ಧ್ಯೇಯನಿಷ್ಠ, ವಿಕ್ರಮ , ಉತ್ಥಾನ, ಕರ್ಮವೀರ, ತರಂಗ, ಸುಧಾ, ಚುನಾವಣೆ, ಐನಕೈ ರಾಯಭಾರ ದಂತಹ ವಾರಪತ್ರಿಕೆಗಳಲ್ಲಿ ವಿಶೇಷ ಲೇಖನವನ್ನು ಬರೆದು ನಾಡಿನಲ್ಲಿ ಹೆಸರು ಮಾಡಿಕೊಂಡವರು. ವಿಚಾರ ಸಂಕೀರ್ಣ, ಆಕಾಶವಾಣಿ ಚಿಂಥನ ಮಂಥನ, ಯುವವಾಣಿ, ಭಾಷಣ, ದೂರದರ್ಶನ, ಸಂವಾದ ದಲ್ಲಿ ಒಂದು ಭಾಗವಾದರೆ ಹೋರಾಟವೇ ಬದುಕಾಗಿಸಿಕೊಂಡು ಜೀವದ ಹಂಗು ತೊರೆದು ಯಾವುದೇ ಜನಪರ ಹೋರಾಟವಾದರೂ ಅದರಲ್ಲಿ ತೊಡಗಿಕೊಂಡವರು.
ಬರವಣಿಗೆಯಲ್ಲೂ ಪರಿಸರದ ಕಾಳಜಿಯನ್ನು ತೋರುತ್ತಾ, ತಮ್ಮತನವನ್ನು ಇಟ್ಟುಕೊಂಡು‌ ತನಿಖಾ ವರದಿ, ವಿಶೇಷ ವರದಿ, ರಾಜಕೀಯ ವಿಶ್ಲೇಷಣೆ ಮೂಲಕ ಹೆಚ್ಚು ಜನರ ಮನ ತಲುಪಿದವರು. ಜೀವದ ಹಂಗು ತೊರೆದು ಸತ್ಯಾನ್ವೇಷಣೆ ಬರವಣಿಗೆ ಮಾಡಿದ್ದನ್ನು ನೋಡಿದ್ದೇವೆ.
ಪತ್ರಿಕಾ ಕ್ಷೇತ್ರದಲ್ಲಿನ ಅವರ ನಡೆ ಸಿಧ್ದಾಂತ ಮಾದರಿಯಾಗಿದೆ.
ತಾಲೂಕಾ ಪತ್ರಿಕಾ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ, ಜಿಲ್ಲಾ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಣೆ ಮಾಡಿ ಪತ್ರಿಕಾ ಸಂಘಟನೆಯಲ್ಲಿ ಅನುಭವ ಹೊಂದಿದವರು. ಜೊತೆಗೆ ಸಾರ್ವಜನಿಕ, ಸಾಮಾಜಿಕ ಕ್ಷೇತ್ರವಾದ ಕಿಸಾನ್ ಸಂಘ, ವೃಕ್ಷಲಕ್ಷ ಆಂದೋಲನ, ಉ.ಕ.ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ, ಊರಿನ ಶಾಲಾಭಿವೃಧ್ದಿ ಸಮಿತಿ, ಸರಕಾರದ ಜೀವ ವೈವಿಧ್ಯ ಮಂಡಳಿಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಪತ್ರಿಕೋಧ್ಯಮ ಕ್ಷೇತ್ರದಲ್ಲಿಯೇ ಅವರದ್ದೊಂದು‌ ಮೈಲಿಗಲ್ಲು ಎಂದರೆ  ತಪ್ಪಲ್ಲ.
ಅವರ ವಿವಿಧ ಕ್ಷೇತ್ರದ ಸಾಧನೆಗೆ ಆನಗೋಡ ಸುದರ್ಶನ ಸೇವಾ ಪ್ರತಿಷ್ಠಾನದ ಗೌರವ ಸಂಮಾನ, ಶಿರಸಿಯ ಧ್ಯೇಯನಿಷ್ಠ ಪತ್ರಕರ್ತದಿಂದ ಕಲಿತ ಪತ್ರಿಕೋಧ್ಯಮದಲ್ಲಿ ಕಾದುಕೊಂಡ ರಾಜಿಯಿಲ್ಲದ ಅವರ ಬರವಣಿಗೆ, ದಿಟ್ಟ ನಿಲುವಿಗೆ ಸಾಮಾಜಿಕ ಸ್ಪಂದನೆಗೆ ೨೦೧೯ ರಲ್ಲಿ “ದಿ.ಅಜ್ಜಿಬಳ ದತ್ತಿನಿಧಿ “ಪ್ರಶಸ್ತಿಯನ್ನು ಪಡೆಯುವ ಮೂಲಕ ಪ್ರಪ್ರಥಮ ಬಾರಿಗೆ ಯಲ್ಲಾಪುರದ ನೆಲಕ್ಕೆ ಗೌರವ ತಂದುಕೊಟ್ಟ ಕೀರ್ತಿ ಅವರದ್ದಾಗಿದೆ. ಅವರ ಪ್ರಕೃತಿಯ ರಕ್ಷಣೆ, ಕಾಳಜಿಗೆ ಜೀವವನವನ್ನು ಶ್ರೀಗಂಧದ ಕೊರಡಿನ ಹಾಗೆ ಸವೆಸಿದ ಸಾತೊಡ್ಡಿಗೆ ಶ್ರೀಗಂಧ ಪ್ರಶಸ್ತಿ”  ಸೌಭಾಗ್ಯವೂ ದೊರೆತಿದೆ. ಪ್ರತಿಷ್ಠಿತ ಸಂಕಲ್ಪ ಸಂಸ್ಥೆಯ ಸಂಕಲ್ಪ ಪ್ರಶಸ್ತಿ , ವಿವಿಧ ಸಹಕಾರಿ ಸಂಘಗಳ ಗೌರವಕ್ಕೆ ಆದರರಾಗಿದ್ದಾರೆ. ಪತ್ರಿಕೋಧ್ಯಮದಲ್ಲಿ ಕಪ್ಪು ಚುಕ್ಕೆಯಿಲ್ಲದ ವರದಿಗಾರಿಕೆಯಿಂದ ಸುದ್ದಿಯಲ್ಲಿ ತಮ್ಮದೇ ಆದ ಛಾಪು, ವಿಶಿಷ್ಠತೆಯನ್ನು ಮೈಗೂಡಿಸಿಕೊಂಡು ಬಂದಿರುವ ಅವರ ೩೭ ವರ್ಷ ದೀರ್ಘ ಕಾಲದ ಪತ್ರಿಕಾ ಕ್ಷೇತ್ರದ ಕೈಂಕರ್ಯಕ್ಕೆ ತಾಲೂಕಾ ಮಟ್ಟದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಜು ೨೧ ರಂದು ಸನ್ಮಾನಿಸುತ್ತಿರುವದು ಸ್ತುತ್ಯಾರ್ಹವಾದುದು.


ಸಮಾಜ ಸೇವಕ ಪತ್ರಕರ್ತ ಕೆ ಎಸ್ ಭಟ್ ಆನಗೋಡ

ಹಲವು ರೀತಿಯಲ್ಲಿ ಸಮಾಜ ಸೇವೆಯಲ್ಲಿರುವ  ಪತ್ರಕರ್ತ ಕೆ.ಎಸ್.ಭಟ್ಟ ಆನಗೋಡ…
ಎರಡು ದಶಕದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ನಿರ್ಗತಿಕರಿಗೆ ಸರಕಾರದ ಸೌಲಭ್ಯ ಸಿಗುವಂತೆ ಮಾಡುವುದರೊಂದಿಗೆ ನಿರಕ್ಷರಕುಕ್ಷಿಗಳಿಗೆ ಅಕ್ಷರ ಜ್ಞಾನ ನೀಡುತ್ತ ಸರಕಾರದ ಸಾಕ್ಷರತೆ, ನೈರ್ಮಲ್ಯ ಯೋಜನೆಯ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಹೆಜ್ಜೆ ಹಾಕುತ್ತ ಹೊರಟವರು.
ಅಬ್ದುಲ್ ನಜೀರಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಲ್ಲೂ ಜ್ಞಾನವಿಕಾಸ ಕೇಂದ್ರಗಳಿಗೆ ತೆರಳಿ ಮಾರ್ಗದರ್ಶನ ನೀಡುತ್ತ ತಮ್ಮ ಜ್ಞಾನವನ್ನು ಬೇರೆಯವರಿಗೆ ದಾರೆ ಎರೆದವರು. ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಿಕಾ ಸಂಘದ ಅಧ್ಯಕ್ಷರಾಗಿ ಗ್ರಹರಕ್ಷಕ ದಳದ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.


ಅವರ ವಿಶೇಷ ಕಾಳಜಿಯ ಸಾಮಾಜಿಕ ಕೆಲಸಕ್ಕೆ 2006-07 ಸಾಲಿನಲ್ಲಿ ‘ಸತ್ಯೇನ ಮಿತ್ರ ‘ ರಾಷ್ಟ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲರವರಿಂದ ಪಡೆದ ಹೆಗ್ಗಳಿಕೆ ಅವರದು.ರಾಜ್ಯ ಸರಕಾರ ನೀಡುವ ಯುವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿ ಸೇರಿದೆ. ಸಹಕಾರಿ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ಹಾಲಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಸ್ಥೆಯ ಪ್ರವರ್ತಕ ಮಂಡಳಿಯ ಸದಸ್ಯರಾಗಿ,ಯಲ್ಲಾಪುರ ಸಲಹಾ ಸಮೀತಿಯ ಅಧ್ಯಕ್ಷರಾಗಿ ಶ್ರೀಮಾತಾ ಟ್ರಸ್ಟ್ ಕಾರ್ಯದರ್ಶಿಯಾಗಿ ಗ್ರಾಮ ವಿಕಾಸ ಪೌಂಡೆಶನ್ ಮಂಚಿಕೇರಿ ಗೌರವಾದ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದದ್ದನ್ನು ಸ್ಮರಿಸಬಹುದು. ಹೋರಾಟ ಪ್ರವೃತ್ತಿಯ ಅವರು ಬೀಸಗೋಡ ಗಣಿಗಾರಿಕೆಯ ವಿರುದ್ದ, ಬೇಡ್ತಿ ನದಿಗೆ ಕಟ್ಟುವ ಡ್ಯಾಮಿನ ವಿರದ್ಧ ಧ್ವನಿ ಎತ್ತಿ ಹೋರಾಟದಲ್ಲಿ ತೊಡಗಿಸಿಕೊಂಡವರು. ತಾಲುಕಾ ಜೀವವೈವಿದ್ಯತಾ ನಿರ್ವಹಣಾ ಸಮಿತಿ ಸಂಪನ್ಮೂಲ ವ್ಯಕ್ತಿ ಹಾಗೂ ಸಮೀತಿಯ ಸಂಪನ್ಮೂಲ ವ್ಯಕ್ತಿಯೂ ಹೌದು.
ಅಕ್ಷರ ಪ್ರೀತಿಯ ಬೆನ್ನು ಹತ್ತಿದ ಇವರು ಪ್ರಸ್ತುತ ಲೋಕಧ್ವನಿ ಯ ವರದಿಗಾರರಾಗಿದ್ದಾರೆ. ಎರಡು ದಶಕದ ಕಾಲದ ಪತ್ರಿಕೆ, ಸಾಮಾಜಿಕ ಕ್ಷೇತ್ರದ ಸೇವೆಗೆ ತಾಲೂಕಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಜು ೨೧ ಸನ್ಮಾನಿಸುತ್ತಿದ್ದಾರೆ.


ವ್ಯಂಗ್ಯ ಚಿತ್ರ ಬ್ರಹ್ಮ  ನಾಗೇಂದ್ರ ಯಲ್ಲಾಪುರ ಅವರ ಚಿತ್ರ

6000 ಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರ, ಈ ಬರಹಗಾರ ನಾಗೇಂದ್ರ ಯಲ್ಲಾಪುರ

ಪತ್ರಿಕಾ ರಂಗದಲ್ಲಿ ನಾಗೇಂದ್ರ ಯಲ್ಲಾಪುರ ಅವರು ತಮ್ಮದೇ ಆದ ಹೆಸರನ್ನು ಸಂಪಾದಿಸಿದ್ದಾರೆ. ಹದಿನಾರನೇ ವಯಸ್ಸಿಗೆ ಇವರ ಮೊದಲ ವ್ಯಂಗ್ಯಚಿತ್ರ ಪ್ರಕಟವಾಗಿದೆ. ಧಾರವಾಡದ ಕಾಲೇಜಿನ ದಿನಗಳಲ್ಲೇ ಪಾಟೀಲ ಪುಟ್ಟಪ್ಪನವರ ವಿಶ್ವವಾಣಿ, ಪ್ರಪಂಚ, ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಕಾರರಾಗಿ ಕಾರ್ಯ ಆರಂಭಿಸಿದರು. 1994 ರಿಂದ ಬೆಂಗಳೂರಿನಲ್ಲಿ ಹತ್ತು ವರ್ಷ ಪತ್ರಕರ್ತರಾಗಿ, ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ವಾರಪತ್ರಿಕೆ, ಜಾಣಗೆರೆ ಪತ್ರಿಕೆ, ಬೆಂಗಳೂರು ಇವನಿಂಗರ್, ಮಲ್ಲಿಗೆ, ಹಾಯ್ ಬೆಂಗಳೂರು, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದರು. ಯಲ್ಲಾಪುರ ಪ್ರಕಾಶನ ಹಟ್ಟು ಹಾಕಿ 24 ಪುಸ್ತಕಗಳನ್ನು ಹೊರ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ 6 ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು, ಸಾವಿರಕ್ಕೂ ಹೆಚ್ಚು ಬರಹಗಳು ಪ್ರಕಟವಾಗಿವೆ. ರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಸಂಪಾದಿಸಿದ್ದಾರೆ. 2000 ದಲ್ಲಿ ಬೆಂಗಳೂರಿನ ಅರಣ್ಯ ಭವನದಲ್ಲಿ ರಾಜ್ಯಮಟ್ಟದ ವ್ಯಂಗ್ಯ ಚಿತ್ರ ಸ್ಪರ್ಧೆ, ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಸಂಘಟಿಸಿದ ಹೆಮ್ಮೆ ಇವರದು.
ಡಾ. ರಾಜ್ ಕುಮಾರ್, ರಾಮಕೃಷ್ಣ ಹೆಗಡೆ, ಮನಮೋಹನಸಿಂಗ್, ಬಂಗಾರಪ್ಪ, ಮೊಯಿಲಿ, ಇನ್ನೂ ಹಲವಾರು ಗಣ್ಯರ ಕ್ಯಾರಿಕೇಚರ್ ಗಳನ್ನು ಅವರ ಎದುರಿನಲ್ಲೇ ಕುಳಿತು ಬರೆದಿದ್ದಾರೆ. ಡ್ರಾಯಿಂಗ್ ಎಂಡ್ ಪೇಂಟಿಂಗನಲ್ಲಿ ಮಾಸ್ಟರ್ ಪದವಿ ಸಂಪಾದಿಸಿದ್ದಾರೆ.

ಈ ಮೂವರ ಸಾಧನೆ ಅಪಾರ . ಇವರ ಈ ಸಾಧನೆಗೆ ಪತ್ರಿಕಾ ಸಂಘಟನೆ ನೀಡುತ್ತಿರುವ ಈ ಗೌರವಕ್ಕೆ ಭಾಜನರಾದ ಪ್ರೀತಿಯ ಮೂವರಿಗೂ “ಹಳ್ಳಿನ್ಯೂಸ್ ” ವತಿಯಿಂದ  ಶುಭಾಷಯಗಳು.

Leave a Reply

Your email address will not be published. Required fields are marked *