ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಜಾಗತಿಕ ಸ್ಪರ್ಧೆ ಎದುರಿಸುವ ಕೌಶಲ್ಯ ಬೆಳೆಯಲಿ: ಸಂಸದ  ಕಾಗೇರಿ

ಹಂಚಿಕೊಳ್ಳಿ

ಶಿರಸಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ಶಿಕ್ಷಣ ಪಡೆದು, ಜಾಗತಿಕ ಮಟ್ಟದ ಸ್ಪರ್ಧೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಬಿಸಿಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಕೇಂದ್ರ ಸರ್ಕಾರದ ಒಎನ್‌ಜಿಸಿ ಸಿಎಸ್‌ಆರ್ ವಿಶೇಷ ನಿಧಿಯಡಿ, ಸಂಸದರ ಶಿಫಾರಸಿನ ಮೇರೆಗೆ ಜನಶ್ರೀ ಧಾನ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ 6 ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಸುಮಾರು 20 ಸಾವಿರ ರೂ. ಮೌಲ್ಯದ ಅತ್ಯಾಧುನಿಕ ಟ್ಯಾಬ್‌ಗಳನ್ನು ವಿತರಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ಗಳಲ್ಲಿ ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಜಗತ್ತಿನ ಜ್ಞಾನ ಭಂಡಾರವೇ ಲಭ್ಯವಿದ್ದು, ವಿದ್ಯಾರ್ಥಿಗಳು ಅದರಲ್ಲಿರುವ ಉತ್ತಮ ಮಾಹಿತಿಯನ್ನು ತಮ್ಮ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬಳಸಿಕೊಳ್ಳಬೇಕು. ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದ ಯುಗವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯ ಕೀಳರಿಮೆಗೆ ಒಳಗಾಗದೆ ಆನ್‌ಲೈನ್ ಕಲಿಕಾ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಈ ಟ್ಯಾಬ್‌ಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ ಹಾಗೂ ಯೋಜನೆಯ ಮಹತ್ವವನ್ನು ವಿವರಿಸಿದರು.
ಸರ್ಕಾರಿ ಪ್ರೌಢಶಾಲೆ ಜಡ್ಡಿಗದ್ದೆ, ಗಜಾನನ ಪ್ರೌಢಶಾಲೆ ಹೆಗಡೆಕಟ್ಟ, ಜಯಂತಿ ಪ್ರೌಢಶಾಲೆ ಬನವಾಸಿ, ಸೂರ್ಯನಾರಾಯಣ ಪ್ರೌಢಶಾಲೆ ಬಿಸಿಲಕೊಪ್ಪ, ಶಾರದಾಂಬ ಹೈಸ್ಕೂಲ್ ಭೈರುಂಬೆ ಹಾಗೂ ಜನತಾ ವಿದ್ಯಾಲಯ ಬರೂರು ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಲಾಯಿತು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ಜಿ.ಎಸ್.ಎಸ್. ಅವರ ಜನಪ್ರಿಯ ಭಾವಗೀತೆಯನ್ನು ಸುಮಧುರವಾಗಿ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ, ಸೂರ್ಯನಾರಾಯಣ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎಂ. ಹೆಗಡೆ, ಉಪಾಧ್ಯಕ್ಷ ಪ್ರಭಾಕರ ಹೆಗಡೆ, ಕಾರ್ಯದರ್ಶಿ ಶ್ರೀಧರ ನಾಯ್ಕ ಬಿಸಿಲಕೊಪ್ಪ, ಜಿ.ಕೆ. ಹೆಗಡೆ, ಬಿ.ಎಂ. ಹೆಗಡೆ, ಬನವಾಸಿ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಗಣೇಶ ಸಣ್ಣಲಿಂಗಣ್ಣನವರ್, ವಿವಿಧ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *