ಮುಂಬೈ: ಕನ್ನಡ ಚಿತ್ರರಂಗದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಗ್ಲೋಬಲ್ ಸ್ಟಾರ್ ಯಶ್ (Yash) ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ (Radhika Pandit) ಈಗ ರಿಯಲ್ ಎಸ್ಟೇಟ್ ಲೋಕದಲ್ಲೂ ಭಾರಿ ಸದ್ದು ಮಾಡಿದ್ದಾರೆ. ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಹಾಗೂ ಐಷಾರಾಮಿ ಪ್ರದೇಶವಾದ ಅಲಿಬಾಗ್ನಲ್ಲಿ ಈ ದಂಪತಿ ಬರೋಬ್ಬರಿ 24 ಕೋಟಿ ರೂಪಾಯಿ ಮೌಲ್ಯದ ಸುಂದರ ಸಮುದ್ರ ತೀರದ ಸಮೀಪವಿರುವ ಜಮೀನನ್ನು ಖರೀದಿಸಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್ (Alibag) ತಾಲ್ಲೂಕಿನ ಕಾಮತ್ ಗ್ರಾಮದಲ್ಲಿರುವ ಎರಡು ಪ್ರಮುಖ ಕೃಷಿ ಜಮೀನುಗಳನ್ನು ಯಶ್ ದಂಪತಿ ತಮ್ಮದಾಗಿಸಿಕೊಂಡಿದ್ದಾರೆ. ಇದು ಒಟ್ಟು 5,289 ಚದರ ಮೀಟರ್ ವಿಸ್ತೀರ್ಣದ ಬೃಹತ್ ಆಸ್ತಿಯಾಗಿದ್ದು, ಪ್ರಕೃತಿ ರಮಣೀಯ ಸಮುದ್ರ ತೀರದ ಅತ್ಯಂತ ಸನಿಹದಲ್ಲೇ ಇರುವುದು ಇದರ ವಿಶೇಷತೆಯಾಗಿದೆ.
ಈ ಹೈ-ಪ್ರೊಫೈಲ್ ಆಸ್ತಿ ಖರೀದಿ ಪ್ರಕ್ರಿಯೆಯು ಮೇ 18 ರಂದೇ ಅಲಿಬಾಗ್ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕೃತವಾಗಿ ನೋಂದಣಿಯಾಗಿದೆ (Registration). ಜಮೀನಿನ ಒಟ್ಟು ಮೌಲ್ಯ 24 ಕೋಟಿ ರೂಪಾಯಿಗಳಾಗಿದ್ದು, ಇದರ ಜೊತೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸರ್ಕಾರದ ನಿಯಮಾವಳಿಗಳ ಪ್ರಕಾರ ಬರೋಬ್ಬರಿ 1.44 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ (Stamp Duty) ಹಾಗೂ ಇತರೆ ನೋಂದಣಿ ಶುಲ್ಕಗಳನ್ನೂ ಸಹ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ವರ್ಷಗಳಿಂದ ಅಲಿಬಾಗ್ ಪ್ರದೇಶವು ದೇಶದ ಪ್ರಮುಖ ಸೆಲೆಬ್ರಿಟಿಗಳು, ಉದ್ಯಮಿಗಳು ಹಾಗೂ ದೊಡ್ಡ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ ಅತ್ಯಂತ ಹತ್ತಿರದಲ್ಲಿರುವುದು ಮತ್ತು ಇಲ್ಲಿನ ಅತ್ಯದ್ಭುತ ಸಮುದ್ರ ತೀರಗಳ ಕಾರಣದಿಂದಾಗಿ ಬಿಗ್ ಸ್ಟಾರ್ಸ್ ಇಲ್ಲಿ ಐಷಾರಾಮಿ ಮನೆಗಳನ್ನು ಕಟ್ಟಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದೇ ಸಾಲಿಗೆ ಈಗ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್ ದಂಪತಿ ಕೂಡ ಸೇರ್ಪಡೆಯಾಗಿದ್ದಾರೆ.

Leave a Reply