ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಕ್ಕಳ ಆಟಿಕೆಗಳ ನಡುವೆ ಅವಿತಿದ್ದ ಹಾವು ಕಚ್ಚಿದ ಪರಿಣಾಮ ನಾಲ್ಕು ವರ್ಷದ ಪುಟ್ಟ ಬಾಲಕಿಯೊಬ್ಬಳು ತೀವ್ರ ಅಸ್ವಸ್ಥಗೊಂಡಿದ್ದಾಳೆ.
ಮಲ್ಲಿಗೆಮಜಲು ನಿವಾಸಿ ಸಿಯಾಬ್ ಅವರ 4 ವರ್ಷದ ಪುತ್ರಿ ಪಾತಿಮತ್ ಸಹದಿಯಾ ಹಾವು ಕಡಿತಕ್ಕೊಳಗಾದ ದುರ್ದೈವಿ. ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಬಾಲಕಿ ಎಂದಿನಂತೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆಯ ವಿವರ: ಅಂಗನವಾಡಿ ಕೊಠಡಿಯೊಳಗೆ ಇರಿಸಲಾಗಿದ್ದ ಮಕ್ಕಳ ಆಟಿಕೆಗಳ ನಡುವೆ ಹಾವೊಂದು ಬಂದು ಅಡಗಿ ಕುಳಿತಿತ್ತು. ಇದನ್ನು ಗಮನಿಸದ ಬಾಲಕಿ ಪಾತಿಮತ್ ಸಹದಿಯಾ ಆಟವಾಡಲು ಆಟಿಕೆಗಳನ್ನು ತೆಗೆದುಕೊಳ್ಳಲು ಹೋದಾಗ ಏಕಾಏಕಿ ಹಾವು ಕಚ್ಚಿದೆ. ಹಾವು ಕಚ್ಚಿದ ರಭಸಕ್ಕೆ ಪುಟ್ಟ ಬಾಲಕಿ ಜೋರಾಗಿ ಅಳಲು ಆರಂಭಿಸಿದ್ದಾಳೆ. ಬಾಲಕಿಯ ಆಕ್ರಂದನ ಕೇಳಿ ಧಾವಿಸಿ ಬಂದ ಅಂಗನವಾಡಿ ಸಹಾಯಕಿ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯು ಬಿ.ಎಲ್.ಓ. (BLO) ಕರ್ತವ್ಯದ ನಿಮಿತ್ತ ಹೊರಹೋಗಿದ್ದರು ಎಂದು ತಿಳಿದುಬಂದಿದೆ.
ಹಾವು ಕಚ್ಚಿದ ಪರಿಣಾಮ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪೋಷಕರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಬಾಲಕಿ ತೀವ್ರ ನಿಗಾದಲ್ಲಿದ್ದಾಳೆ. ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

Leave a Reply