ಸರ್ಕಾರಿ ಶಾಲೆಯ ಬಿಸಿಯೂಟದ ಕೊಠಡಿಯಲ್ಲಿ Gas ಲೀಕ್ ಆಗಿ ಬೆಂಕಿ: ತಪ್ಪಿದ ಭಾರಿ ದುರಂತ!

 

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ಸರ್ಕಾರಿ ಶಾಲೆಯೊಂದರ ಬಿಸಿಯೂಟದ ಕೊಠಡಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಮಕ್ಕಳು ಇರುವಾಗಲೇ ಏಕಾಏಕಿ ಬಿಸಿಯೂಟದ ಕೊಠಡಿಯಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಶಾಲಾ ಆವರಣದಲ್ಲಿ ಕೆಲಕಾಲ ತೀವ್ರ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಕೊಠಡಿಯಲ್ಲಿ ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿದ್ದನ್ನು ಕಂಡು ಶಾಲಾ ಸಿಬ್ಬಂದಿ, ಮಕ್ಕಳು ಹಾಗೂ ಜನರು ಒಂದು ಕ್ಷಣ ಗಾಬರಿಗೊಂಡು ನಿಂತಿದ್ದರು.

​ಪ್ರಾಣಾಪಾಯದಿಂದ ಪಾರಾದ ಮಕ್ಕಳು

​ತಕ್ಷಣವೇ ಎಚ್ಚೆತ್ತುಕೊಂಡ ಗ್ರಾಮಸ್ಥರು ಅತ್ಯಂತ ಸಮಯಪ್ರಜ್ಞೆ ಮೆರೆದು ಕಾರ್ಯಾಚರಣೆಗಿಳಿದರು. ತ್ವರಿತವಾಗಿ ನೀರು ಹಾಕಿ ಬೆಂಕಿಯನ್ನು ನಂದಿಸುವ ಮೂಲಕ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ. ಒಂದು ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದ್ದರೆ, ಶಾಲೆಯಲ್ಲಿದ್ದ ಮುಗ್ಧ ಮಕ್ಕಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ದಟ್ಟವಾಗಿತ್ತು. ಗ್ರಾಮಸ್ಥರ ಸಾಹಸದಿಂದಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಅವಘಡ ಸಂಭವಿಸಿಲ್ಲ ಮತ್ತು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

​ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಮಸ್ಥರ ಆಕ್ರೋಶ

​ಈ ಗಂಭೀರ ಅವಘಡಕ್ಕೆ ಗ್ಯಾಸ್ ಏಜೆನ್ಸಿಯವರ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಜೆನ್ಸಿಯವರು ಮೊದಲೇ ಸೋರಿಕೆಯಾಗುವ (ಲೀಕೇಜ್ ಇರುವ) ದೋಷಪೂರಿತ ಸಿಲಿಂಡರ್‌ಗಳನ್ನು ಶಾಲೆಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *