Weather | ರಾಜ್ಯದಲ್ಲಿ ಮುಂಗಾರು ಅಬ್ಬರ: ಗಂಟೆಗೆ 50 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ..!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ‘ಅತಿ ಭಾರಿ ಮಳೆ’ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜೂನ್ 15 ರವರೆಗೆ ಕರಾವಳಿಯಾದ್ಯಂತ ಮಳೆಯ ಅಬ್ಬರ ಮುಂದುವರಿಯಲಿದ್ದು, ತೀರ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವಲಯವಾರು ಮಳೆ ಮುನ್ಸೂಚನೆ (Weather Forecast):

  • ಉತ್ತರ ಒಳನಾಡು: ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು-ಮಿಂಚಿನ ಮುನ್ನೆಚ್ಚರಿಕೆ ನೀಡಲಾಗಿದೆ.

  • ದಕ್ಷಿಣ ಒಳನಾಡು & ಮಲೆನಾಡು: ಕಾಫಿನಾಡು ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಲಿದ್ದು, ಭಾರಿ ಮಳೆಯ ಮುನ್ಸೂಚನೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿ ಬೀಸಲಿದೆ.

  • ನದಿ ತೀರದ ಜನರಿಗೆ ಎಚ್ಚರಿಕೆ: ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸತತ ಮಳೆಯಿಂದಾಗಿ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ನದಿ ತೀರದ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

  • ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಆಕಾಶ ಸಾಮಾನ್ಯವಾಗಿ ಮೋಡ ಕವಿದ ವಾತಾವರಣದಿಂದ ಕೂಡಿರಲಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.

ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ದಾಖಲಾದ ಮಳೆ ವಿವರ (ಜೂನ್ 9 ರಿಂದ 10):

ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬರೋಬ್ಬರಿ 48.5 ಮಿ.ಮೀ ಮಳೆ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಧಿಕ ಮಳೆ ಪಡೆದ ಕೇಂದ್ರವಾಗಿದೆ.

ವಲಯ / ಕೇಂದ್ರಗಳು ದಾಖಲಾದ ಮಳೆ (ಮಿ.ಮೀ ನಲ್ಲಿ)
ಮೂಡಿಗೆರೆ (ಚಿಕ್ಕಮಗಳೂರು) 48.5 ಮಿ.ಮೀ (ರಾಜ್ಯದಲ್ಲೇ ಗರಿಷ್ಠ)
ಕೆವಿಕೆ ಮಂಗಳೂರು / ಮಂಗಳೂರು ನಗರ 21.5 ಮಿ.ಮೀ / 11.0 ಮಿ.ಮೀ
ವಿಜಯಪುರ / ಆರ್‌ಎಆರ್‌ಎಸ್ ವಿಜಯಪುರ 18.8 ಮಿ.ಮೀ / 18.5 ಮಿ.ಮೀ
ಕಾರವಾರ (ಉತ್ತರ ಕನ್ನಡ) 15.0 ಮಿ.ಮೀ
ನವಿಲೆ (ಶಿವಮೊಗ್ಗ) 14.0 ಮಿ.ಮೀ
ಹಾಸನ 13.0 ಮಿ.ಮೀ
ಹೊನ್ನಾವರ / ಶಕ್ತಿನಗರ 12.0 ಮಿ.ಮೀ / 11.0 ಮಿ.ಮೀ
ಧಾರವಾಡ (ಯುಎಎಸ್) 9.0 ಮಿ.ಮೀ
ಕಲಬುರಗಿ / ಚಿತ್ರದುರ್ಗ 6.6 ಮಿ.ಮೀ / 4.8 ಮಿ.ಮೀ
ಬೆಂಗಳೂರು ನಗರ 0.1 ಮಿ.ಮೀ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಲಘುಯಿಂದ ಸಾಧಾರಣ ಹಾಗೂ ಕೆಲವು ಕಡೆ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *