ಬೆಂಗಳೂರು: ಮಂಗಳೂರು-ಮುಂಬೈ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದ್ದಾರೆ.
ಇಂದು ಸಿಎಂ ಭೇಟಿಯಾದ ಕೋಟ ಪೂಜಾರಿ, ಈ ಬಗ್ಗೆ ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ. ಕೊಂಕಣ ರೈಲ್ವೆ ಯೋಜನೆ ಆರಂಭದ ಸಮಯದಲ್ಲಿ ಕರ್ನಾಟಕ ಸರ್ಕಾರವು ಶೇ. 15 ರಷ್ಟು ಅಂದರೆ ಸುಮಾರು 200 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿತ್ತು. ಮೂಲ ಒಪ್ಪಂದದ ಪ್ರಕಾರ, ಯೋಜನೆ ಆರಂಭವಾದ ಹತ್ತು ವರ್ಷಗಳಲ್ಲಿ ಈ ನಿಗಮವು ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಬೇಕಿತ್ತು. ಆದರೆ ದಶಕಗಳು ಕಳೆದರೂ ಈ ವಿಲೀನ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿಗೆ ಹಿನ್ನಡೆ ಮತ್ತು ಹಣಕಾಸಿನ ಕೊರತೆ: ದೇಶದ ಇತರೆ ರೈಲ್ವೆ ಮಾರ್ಗಗಳು ಕೇಂದ್ರ ಸರ್ಕಾರದ ಬಜೆಟ್ ಅನುದಾನದಡಿ ಅಭಿವೃದ್ಧಿ ಹೊಂದುತ್ತಿದ್ದರೆ, ಕೊಂಕಣ ಮಾರ್ಗ ಮಾತ್ರ ಪ್ರತ್ಯೇಕ ನಿಗಮದ ವ್ಯಾಪ್ತಿಯಲ್ಲಿದೆ. ನಿಗಮವು ನಷ್ಟದಲ್ಲಿ ಮುಂದುವರಿದಿರುವುದರಿಂದ ಹಳಿ ಡಬ್ಲಿಂಗ್, ನಿಲ್ದಾಣಗಳ ಆಧುನೀಕರಣ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಸಿಂಗಲ್ ಲೈನ್ ಹಾಗೂ ದಟ್ಟಣೆ ಸಮಸ್ಯೆ: ಪ್ರಸ್ತುತ ಈ ಮಾರ್ಗದಲ್ಲಿ ರೈಲುಗಳ ಓಡಾಟ ಹೆಚ್ಚಾಗಿದ್ದು, ಶೇ. 175 ಕ್ಕೂ ಹೆಚ್ಚು ದಟ್ಟಣೆ ಉಂಟಾಗುತ್ತಿದೆ. ಆದಾಗ್ಯೂ ಮಾರ್ಗವು ಇನ್ನೂ ಏಕ ಹಳಿಯಾಗಿಯೇ ಉಳಿದಿರುವುದರಿಂದ ಸಾರ್ವಜನಿಕರಿಂದ ಡಬ್ಲಿಂಗ್ ಕಾಮಗಾರಿಗೆ ತೀವ್ರ ಒತ್ತಾಯ ಕೇಳಿಬರುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ.
ರಾಜ್ಯದ ಪಾಲನ್ನು ಹಸ್ತಾಂತರಿಸಲು ವಿನಂತಿ: ಈಗಾಗಲೇ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿಲೀನ ಪ್ರಕ್ರಿಯೆಗೆ ಪೂರಕವಾಗಿ ಹೆಜ್ಜೆ ಇಟ್ಟಿವೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಸಹ ತನ್ನ ಶೇರುಗಳನ್ನು ಭಾರತೀಯ ರೈಲ್ವೆಗೆ ಹಸ್ತಾಂತರಿಸಿ ನಿಗಮದಿಂದ ಹೊರಬರುವುದು ರಾಜ್ಯದ ಆರ್ಥಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತವಾಗಿದೆ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆಯಲು ಆಗ್ರಹ: ಕೊಂಕಣ ರೈಲ್ವೆ ಮಾರ್ಗವು ಸಂಪೂರ್ಣವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಂಡು, ಕೇಂದ್ರ ಸರ್ಕಾರದ ಬಜೆಟ್ ಅನುದಾನದ ಮೂಲಕ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತನ್ನ ಒಪ್ಪಿಗೆಯನ್ನು ಸೂಚಿಸಿ ಕೇಂದ್ರ ರೈಲ್ವೆ ಸಚಿವರಿಗೆ ಅಧಿಕೃತ ಪತ್ರವನ್ನು ಕಳುಹಿಸಿಕೊಡಬೇಕೆಂದು ಕೋಟ ಶ್ರೀನಿವಾಸ ಪೂಜಾರಿ ಅವರು ಡಿಕೆಶಿ ಅವರಲ್ಲಿ ವಿನಂತಿಸಿದ್ದಾರೆ.

Leave a Reply