ಬೆಂಗಳೂರು: ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಜಿಲ್ಲಾವಾರು ಹಾಗೂ ಅಂತರ್-ಜಿಲ್ಲಾವಾರು ಪ್ರವಾಸಿ ಸರ್ಕ್ಯೂಟ್ಗಳನ್ನು ರಚಿಸಲು ಕಂದಾಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಹೊಸ ಸುತ್ತೋಲೆ ಹೊರಡಿಸಿದ್ದು, ದೇವಾಲಯಗಳ ಮೂಲಸೌಕರ್ಯ ಮತ್ತು ಭದ್ರತೆ ಅಭಿವೃದ್ಧಿಗೆ 13 ಅಂಶಗಳ ‘ಮಾಸ್ಟರ್ ಪ್ಲಾನ್’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.
ಮಾರ್ಗಸೂಚಿಗಳ ಅನುಷ್ಠಾನದ ಬಗ್ಗೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸತಕ್ಕದ್ದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸರ್ಕಾರದ ಹೊಸ ಸುತ್ತೋಲೆಯ ಪ್ರಮುಖ ಅಂಶಗಳು:
- ಮೂಲಸೌಕರ್ಯ ಮತ್ತು ಭದ್ರತೆ: ಭಕ್ತರಿಗೆ ಅನುಕೂಲವಾಗುವಂತೆ ಉತ್ತಮ ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಭದ್ರತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ (Common area) ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.
- ವಸತಿ ಹಾಗೂ ಪಾರ್ಕಿಂಗ್ ವ್ಯವಸ್ಥೆ: ಭಕ್ತಾದಿಗಳಿಗೆ ಉತ್ತಮ ವಸತಿ ಕೊಠಡಿಗಳನ್ನು ನಿರ್ಮಿಸುವುದು. ವಾಹನ ದಟ್ಟಣೆ ಹಾಗೂ ಘರ್ಷಣೆ ತಪ್ಪಿಸಲು ಏಜೆನ್ಸಿಗಳ ಮೂಲಕ ಪಾರ್ಕಿಂಗ್ ಶುಲ್ಕ ನಿಗದಿಪಡಿಸಿ, ಸುಸಜ್ಜಿತ ನಿಲುಗಡೆ ವ್ಯವಸ್ಥೆ ಮಾಡುವುದು.
- ಆಸ್ತಿ ಸಂರಕ್ಷಣೆ ಮತ್ತು ಜಿಪಿಎಸ್ ಮ್ಯಾಪಿಂಗ್: ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಯಗಳ ಜಮೀನುಗಳ ವಿವರ ಸಂಗ್ರಹಿಸುವುದು ಮತ್ತು ದೇವಾಲಯಗಳ ಸಮೀಪದ ಸರ್ಕಾರಿ ಜಮೀನುಗಳನ್ನು ಆಯಾ ದೇವಸ್ಥಾನಗಳ ಹೆಸರಿಗೆ ಕಾಯ್ದಿರಿಸುವುದು. ದೇವಾಲಯದ ಆಸ್ತಿಗಳ ಜಿಪಿಎಸ್ (GPS) ಸ್ಥಳಗಳನ್ನು KSRSAC ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು.
- ಮಾಸ್ಟರ್ ಪ್ಲಾನ್ ಮತ್ತು ಡಿಪಿಆರ್: ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ದೇವಾಲಯದ ಭೂ ವಿವರಗಳನ್ನು ರವಾನಿಸಿ, ಕನ್ಸಲ್ಟೆಂಟ್ಸ್ ಮೂಲಕ ಸಮಗ್ರ ಮಾಸ್ಟರ್ ಪ್ಲಾನ್ ಹಾಗೂ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವುದು.
- ದಾನಿಗಳಿಗೆ ಉತ್ತೇಜನ: ದೇವಾಲಯಗಳಲ್ಲಿ ಛತ್ರ, ಅತಿಥಿಗೃಹಗಳ ನಿರ್ಮಾಣಕ್ಕೆ ದಾನಿಗಳನ್ನು ಪ್ರೋತ್ಸಾಹಿಸುವುದು.
- ಪ್ರಚಾರ ಮತ್ತು ಸಮನ್ವಯ: ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಧಾರ್ಮಿಕ ತಾಣಗಳಿಗೆ ವ್ಯಾಪಕ ಪ್ರಚಾರ ನೀಡುವುದು. ಭಕ್ತರ ಅನುಕೂಲಕ್ಕಾಗಿ ಪ್ರಮುಖ ಉತ್ಸವಗಳು ಮತ್ತು ಜಾತ್ರೆಗಳ ವಿವರಗಳನ್ನು ವಿಶೇಷ ಕ್ಯಾಲೆಂಡರ್ಗಳಲ್ಲಿ ದಾಖಲಿಸುವುದು.

Leave a Reply