‘Gym Jihad’ ಆರೋಪಕ್ಕೆ ಬಿಗ್ ಟ್ವಿಸ್ಟ್; ಇದು ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಎಂದ ಇಸ್ಮಾಯಿಲ್ ತಾಯಿ!

ದಾವಣಗೆರೆಯಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಜಿಮ್ ಜಿಹಾದ್’ ಆರೋಪ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಈ ಪ್ರಕರಣವು ಜಿಹಾದ್ ಅಥವಾ ಹತ್ತಾರು ಹುಡುಗಿಯರ ಜತೆಗಿನ ವ್ಯವಹಾರವಲ್ಲ, ಬದಲಿಗೆ ಇದು ವ್ಯವಸ್ಥಿತವಾಗಿ ನಡೆದಿರುವ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ತಂತ್ರ ಎಂದು ಜಿಮ್ ಟ್ರೇನರ್ ಇಸ್ಮಾಯಿಲ್ ತಾಯಿ ರಜೀಯಾ ಬೇಗಂ ಗಂಭೀರ ಆರೋಪ ಮಾಡಿದ್ದಾರೆ.

ವಿಶ್ವ ಮುಸ್ಲಿಂ ಪರಿಷತ್ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಜೀಯಾ ಬೇಗಂ, ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆಯ ಫೋಟೋ ಹಾಗೂ ಆಡಿಯೋ ದಾಖಲೆಗಳನ್ನು ಬಿಡುಗಡೆಗೊಳಿಸಿ ಕಣ್ಣೀರು ಹಾಕಿದ್ದಾರೆ.

ನನ್ನ ಮಗ ನಿಖಿಲ್, ಆಕಾಶ್ ಅಥವಾ ರಂಜೀತ್ ಎಂಬ ನಕಲಿ ಹೆಸರುಗಳನ್ನು ಹೇಳಿಕೊಂಡು ಯಾರನ್ನೂ ಪರಿಚಯಿಸಿಕೊಂಡಿಲ್ಲ. ಆತನಿಗೆ 10 ರಿಂದ 12 ಹುಡುಗಿಯರ ಜೊತೆ ಅಫೇರ್ ಇದೆ ಎಂಬುದು ಸಂಪೂರ್ಣ ಸುಳ್ಳು. ಆತನಿಗೆ ಇರೋದು ಒಬ್ಬಳೇ ಹುಡುಗಿ ಜೊತೆ ನಂಟು. ಆ ಮಹಿಳೆ ಮತ್ತು ಆಕೆಯ ಗಂಡ ಸೇರಿ ಜಿಮ್‌ನಲ್ಲಿ ಕೆಲಸ ಮಾಡುವ ಹುಡುಗನ ಸಹಾಯದೊಂದಿಗೆ ನನ್ನ ಮಗನನ್ನು ಹನಿಟ್ರ್ಯಾಪ್ ಮಾಡಿದ್ದಾರೆ.

ಆ ಮಹಿಳೆಯ ಕಾರಣದಿಂದಾಗಿಯೇ ನನ್ನ ಮಗನ ಮೊದಲನೇ ಪತ್ನಿ ಆತನನ್ನು ಬಿಟ್ಟು ಹೋದಳು. ಇಸ್ಮಾಯಿಲ್‌ಗೆ ಎರಡನೇ ಮದುವೆ ಮಾಡಲು ಮುಂದಾದಾಗ ಆಕೆ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಕೊನೆಗೆ 2025ರ ಸೆಪ್ಟೆಂಬರ್‌ನಲ್ಲಿ ಖಾಲಿ ಪೇಪರ್‌ಗೆ ಸಹಿ ಮಾಡಿ, 4.5 ಲಕ್ಷ ರೂಪಾಯಿ ಹಣ ಪಡೆದು ಇನ್ಮುಂದೆ ಸಹವಾಸಕ್ಕೆ ಬರಲ್ಲ ಎಂದು ಹೋಗಿದ್ದಳು.

ಈಗ ಜಿಮ್‌ನ ಸಿಸಿ ಕ್ಯಾಮೆರಾದ ಮೊಬೈಲ್ ಎಕ್ಸೆಸ್ ಪಡೆದುಕೊಂಡು, ಆ ವಿಡಿಯೋಗಳನ್ನು ಇಟ್ಟುಕೊಂಡು ಮತ್ತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಕೇಳಿದಷ್ಟು ದುಡ್ಡು ನೀಡದಿದ್ದಕ್ಕೆ ಈ ರೀತಿ ಪ್ರೀ-ಪ್ಲ್ಯಾನ್ ಮಾಡಿ ಗಲಾಟೆ ಎಬ್ಬಿಸಿದ್ದಾರೆ.

ನನ್ನ ಮಗ ತಪ್ಪು ಮಾಡಿದ್ದಾನೆ, ದುಡಿಯುವ ಜಾಗದಲ್ಲಿ ಆತ ಆ ಕೆಲಸವನ್ನು ಮಾಡಬಾರದಿತ್ತು. ಫೋನ್, ಪೆನ್‌ಡ್ರೈವ್ ಹಾಗೂ ಸಿಸಿ ಕ್ಯಾಮೆರಾದ ಡಿವಿಆರ್ ಎಲ್ಲವೂ ಈಗ ಪೊಲೀಸರ ವಶದಲ್ಲಿದೆ. ತನಿಖೆ ನಡೆಯಲಿ, ಒಂದು ವೇಳೆ ನನ್ನ ಮಗ ತಪ್ಪು ಮಾಡಿದ್ದರೆ ಆತನನ್ನು ಜೈಲಿಗೆ ಕಳುಹಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇನ್ನು ಮದುವೆಯಾಗಬೇಕಾದ ಮಗ, ಮಗಳು ಮನೆಯಲ್ಲಿದ್ದು, ಆತನನ್ನು ರೇಪಿಸ್ಟ್ ಎಂದರೆ ನಮಗೆ ಯಾರು ಸಂಬಂಧ ಬೆಳೆಸುತ್ತಾರೆ ಎಂದು ರಜೀಯಾ ಬೇಗಂ ಕಣ್ಣೀರು ಹಾಕಿದ್ದಾರೆ.

ಇಸ್ಮಾಯಿಲ್ ಪರ ನಿಂತ ವಿಶ್ವ ಮುಸ್ಲಿಂ ಪರಿಷತ್; ನೈತಿಕ ಪೊಲೀಸ್‌ಗಿರಿಗೆ ಆಕ್ರೋಶ

ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಬಾನ್ ಖಾನ್, ಜಿಮ್ ಟ್ರೇನರ್ ಇಸ್ಮಾಯಿಲ್ ವಿರುದ್ಧ ಯಾರೂ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿಲ್ಲ. ಹಾಗಿದ್ದಾಗ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹಾಗೂ ಸತೀಶ್ ಪೂಜಾರಿಗೆ ಈ ವಿಷಯ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಿದ್ದಾರೆ.

ಯಾರಾದರೂ ತೊಂದರೆಗೆ ಒಳಗಾಗಿದ್ದರೆ ಪೊಲೀಸರಿಗೆ ದೂರು ನೀಡಬೇಕೇ ಹೊರತು, ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿ (Moral Policing) ಮಾಡುವುದು ಸರಿಯಲ್ಲ. ಮಣಿ ಸರ್ಕಾರ್ ಹಾಗೂ ಸತೀಶ್ ಪೂಜಾರಿ ಜಿಮ್ ಬಳಿ ಹೋಗಿ ಬೋರ್ಡ್ ಕಿತ್ತಾಕಿ ಗಲಾಟೆ ಮಾಡಿದ್ದಾರೆ. ಪ್ರತಿ ಬಾರಿಯೂ ಮುಸಲ್ಮಾನರನ್ನು ಟಾರ್ಗೆಟ್ ಮಾಡುವುದೇ ಇವರ ಕೆಲಸವಾಗಿದೆ. ಇಸ್ಮಾಯಿಲ್ ತಪ್ಪು ಮಾಡಿದ್ದರೆ ಕಾನೂನು ರೀತ್ಯಾ ಜೈಲಿಗೆ ಕಳುಹಿಸಲಿ, ನಮ್ಮದೇನೂ ಅಭ್ಯಂತರವಿಲ್ಲ. ಈ ಪ್ರಕರಣದ ಕುರಿತು ವಿಶ್ವ ಮುಸ್ಲಿಂ ಪರಿಷತ್ ನಿಯೋಗವು ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಲಿದೆ ಎಂದು ಸುಬಾನ್ ಖಾನ್ ಹೇಳಿದ್ದಾರೆ.

Leave a Reply

Your email address will not be published. Required fields are marked *