DK ಸರ್ಕಾರದಲ್ಲಿ ದಿನಕ್ಕೊಂದು ಹೊಸ ಹುದ್ದೆ ಸೃಷ್ಟಿ: CM ಗೌರವ ಸಲಹೆಗಾರರಾಗಿ ನಿವೃತ್ತ IAS ಉಪೇಂದ್ರ ತ್ರಿಪಾಠಿ ನೇಮಕ!

ರಾಜ್ಯ ಸರ್ಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಹೊಸ ಹಾಗೂ ಹಿಂದೆಂದೂ ಇರದಂತಹ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ನಿನ್ನೆಯಷ್ಟೇ ಜಿ.ಸಿ. ಚಂದ್ರಶೇಖರ್ ಅವರನ್ನು ಹೊಸ ಹುದ್ದೆಗೆ ನೇಮಕ ಮಾಡಿದ್ದ ಬೆನ್ನಲ್ಲೇ, ಇದೀಗ ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರನ್ನು ಮುಖ್ಯಮಂತ್ರಿಯವರ ಗೌರವ ಸಲಹೆಗಾರರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್. ಆರ್. ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ. ಈ ಆದೇಶದನ್ವಯ, ನಿವೃತ್ತ ಭಾ.ಆ.ಸೇ. (IAS) ಅಧಿಕಾರಿ ಶ್ರೀ ಉಪೇಂದ್ರ ತ್ರಿಪಾಠಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯವರ ಗೌರವ ಸಲಹೆಗಾರರನ್ನಾಗಿ (ಹವಾಮಾನ ಬದಲಾವಣೆ ಕ್ಷೇತ್ರ) ನೇಮಿಸಲಾಗಿದೆ.

ಇದರ ಜೊತೆಗೆ, ಉಪೇಂದ್ರ ತ್ರಿಪಾಠಿ ಅವರನ್ನು ಕರ್ನಾಟಕದ ‘ಹವಾಮಾನ ರಾಯಭಾರಿ’ (Climate Ambassador) ಯನ್ನಾಗಿ ಪ್ರಕಟಿಸಲಾಗಿದೆ. ವಿಶೇಷವೆಂದರೆ, ಈ ಉನ್ನತ ಹುದ್ದೆಯು ಸಂಪೂರ್ಣವಾಗಿ ಸಂಭಾವನೆ ರಹಿತವಾಗಿದ್ದರೂ, ಅವರಿಗೆ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಲಾಗಿದೆ. 

ಒಟ್ಟಾರೆಯಾಗಿ, ಸರ್ಕಾರದಲ್ಲಿ ಸಾಲು ಸಾಲು ಹೊಸ ಹುದ್ದೆಗಳ ಸೃಷ್ಟಿ ಹಾಗೂ ನೇಮಕಾತಿ ಪರ್ವ ಮುಂದುವರಿದಿರುವುದು ರಾಜಕೀಯ ಮತ್ತು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *