Video Callನಲ್ಲಿ ಮುಖ ನೋಡಿ 36 ಲಕ್ಷ ರೂ. ಕೊಟ್ಟು ಮದುವೆಯಾದ ಯುವಕ: ಮುಂದೇನಾಯ್ತು?!

ಹಂಚಿಕೊಳ್ಳಿ

ಚೀನಾದ 32 ವರ್ಷದ ಯುವಕನೊಬ್ಬ ತಾನು ಎಂದಿಗೂ ಮುಖತಃ ಭೇಟಿಯಾಗದ ಯುವತಿಯನ್ನು ಕೇವಲ 5 ನಿಮಿಷದ ವಿಡಿಯೋ ಕಾಲ್‌ನಲ್ಲಿ ನೋಡಿ, ಬರೋಬ್ಬರಿ 36 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆಯಾಗಿದ್ದಾನೆ. ಆದರೆ, ಮದುವೆಯಾದ ಕೇವಲ 9 ದಿನಗಳಲ್ಲೇ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಪೋಷಕರ ಒತ್ತಡ ಹಾಗೂ ಮ್ಯಾಚ್‌ಮೇಕಿಂಗ್ ಏಜೆನ್ಸಿಯ ಸುಳ್ಳು ಭರವಸೆಗಳನ್ನು ಕಣ್ಮುಚ್ಚಿ ನಂಬಿದ ಈ ಯುವಕ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಗು (Gu) ಎಂಬ ಯುವಕನೇ ಈ ಫ್ಲಾಶ್ ಮದುವೆಯ (Flash Marriage) ಸಂತ್ರಸ್ತ. ಈತ ತನ್ನ ಕುಟುಂಬದ ಏಕೈಕ ಪುತ್ರನಾಗಿದ್ದು, ಪೋಷಕರ ತೀವ್ರ ಒತ್ತಡದ ಮೇರೆಗೆ ಮದುವೆಗೆ ಒಪ್ಪಿಕೊಂಡಿದ್ದ. ಇದಕ್ಕಾಗಿ ಆರಂಭದಲ್ಲಿ 200 ಯುವಾನ್ (ಅಂದಾಜು 2,700 ರೂ.) ನೀಡಿ ಸ್ಥಳೀಯ ಮ್ಯಾಚ್‌ಮೇಕಿಂಗ್ ಕೇಂದ್ರದಲ್ಲಿ ನೋಂದಾಯಿಸಿಕೊಂಡಿದ್ದ. ಆತನಿಗೆ ಅದೇ ಭಾಗದ 3 ಯುವತಿಯರನ್ನು ಪರಿಚಯಿಸಿದರೂ, ಯಾರೊಬ್ಬರೂ ಆಸಕ್ತಿ ತೋರಲಿಲ್ಲ. ಈ ವೇಳೆ ಮಧ್ಯವರ್ತಿಯು ಬೇರೆ ಪ್ರಾಂತ್ಯದ ವಧುವನ್ನು ಹುಡುಕುವಂತೆ ಸಲಹೆ ನೀಡಿ, ಕೇವಲ 2 ದಿನಗಳಲ್ಲಿ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದ. ಇದಕ್ಕೆ ಗು ಮತ್ತು ಆತನ ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದರು.

ಕಳೆದ ಏಪ್ರಿಲ್ ತಿಂಗಳಲ್ಲಿ, ಏಜೆನ್ಸಿಯು ಶಾಂಕ್ಸಿ ಪ್ರಾಂತ್ಯದ 30 ವರ್ಷದ ಯುವತಿಯೊಬ್ಬಳ ಪ್ರೊಫೈಲ್ ಅನ್ನು ಗು ಅವರಿಗೆ ನೀಡಿತ್ತು. ಯುವತಿಗೆ ಯಾವುದೇ ಸಾಲಗಳಿಲ್ಲ, ಕ್ರಿಮಿನಲ್ ಹಿನ್ನೆಲೆ ಇಲ್ಲ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಏಜೆನ್ಸಿ ನಂಬಿಸಿತ್ತು. ಅಲ್ಲದೆ, ಆಕೆ ತಕ್ಷಣವೇ ಮದುವೆಯಾಗಿ ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧಳಿದ್ದಾಳೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ಆಕೆಯೊಂದಿಗೆ ಕೇವಲ 5 ನಿಮಿಷಗಳ ಕಾಲ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಗು, ಆಕೆಯ ಕುಟುಂಬ ಮತ್ತು ಕೆಲಸದ ಬಗ್ಗೆ ವಿಚಾರಿಸಿದ. ಆಕೆ ತಾನು ಸೇಲ್ಸ್‌ಪರ್ಸನ್ ಆಗಿರುವುದಾಗಿ ತಿಳಿಸಿದಳಾದರೂ, ಉಳಿದ ಹೆಚ್ಚಿನ ಪ್ರಶ್ನೆಗಳಿಗೆ ಮಧ್ಯವರ್ತಿಯೇ ಉತ್ತರಿಸಿದ್ದನು. ವಿವಾಹಕ್ಕೂ ಮುನ್ನ ಯುವತಿಯ ಕ್ರೆಡಿಟ್ ಹಿಸ್ಟರಿ ಮತ್ತು ವೈದ್ಯಕೀಯ ವರದಿಗಳನ್ನು ನೀಡುವುದಾಗಿ ಏಜೆನ್ಸಿ ಭರವಸೆ ನೀಡಿತ್ತು.

ಏಜೆನ್ಸಿಯ ಮಾತುಗಳನ್ನು ಕುರುಡಾಗಿ ನಂಬಿದ ಯುವಕ, ವಧುವನ್ನು ಖುದ್ದಾಗಿ ಭೇಟಿಯಾಗದೆ ಅಥವಾ ಆಕೆಯ ಕುಟುಂಬದೊಂದಿಗೆ ಯಾವುದೇ ಚರ್ಚೆ ನಡೆಸದೆ ಮದುವೆಗೆ ಸಿದ್ಧನಾದ. ವರದಿಗಳ ಪ್ರಕಾರ, ಗು ಅವರ ಕುಟುಂಬವು ಈ ವಿವಾಹಕ್ಕಾಗಿ ಒಟ್ಟು 265,000 ಯುವಾನ್ (ಅಂದಾಜು 36 ಲಕ್ಷ ರೂ.) ಖರ್ಚು ಮಾಡಿದೆ. ಇದರಲ್ಲಿ 100,000 ಯುವಾನ್ (13.9 ಲಕ್ಷ ರೂ.) ವಧುವಿನ ಬೆಲೆಯಾಗಿ (Bride Price) ಹಾಗೂ 160,000 ಯುವಾನ್ (22.2 ಲಕ್ಷ ರೂ.) ಮ್ಯಾಚ್‌ಮೇಕಿಂಗ್ ಶುಲ್ಕವಾಗಿ ಪಾವತಿಸಲಾಗಿದೆ. ನಂತರ ಮಧ್ಯವರ್ತಿಯೇ ವಧುವನ್ನು ಝೆಜಿಯಾಂಗ್‌ಗೆ ಕರೆತಂದಿದ್ದು, 3 ದಿನಗಳ ಬಳಿಕ ದಂಪತಿ ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದರು. ಅಚ್ಚರಿಯೆಂದರೆ ಆ ಹೊತ್ತಿಗೂ ವರನ ಕುಟುಂಬವು ವಧುವಿನ ಪೋಷಕರನ್ನು ಭೇಟಿಯಾಗಿರಲಿಲ್ಲ.

ಮದುವೆಯಾದ ಕೆಲವೇ ದಿನಗಳಲ್ಲಿ ಏಜೆನ್ಸಿ ಹೇಳಿದ್ದ ಸುಳ್ಳುಗಳು ಒಂದೊಂದಾಗಿ ಬಯಲಾಗಲು ಆರಂಭಿಸಿದವು. ಭರವಸೆ ನೀಡಿದ್ದ ಯಾವುದೇ ದಾಖಲೆಗಳನ್ನು ಏಜೆನ್ಸಿ ಒದಗಿಸಲಿಲ್ಲ. ಗು ತನ್ನ ಪತ್ನಿಯನ್ನು ಬ್ಯಾಂಕ್‌ಗೆ ಕರೆದೊಯ್ದು ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಿದಾಗ, ಆಕೆಯ ಹೆಸರಿನಲ್ಲಿ ಬರೋಬ್ಬರಿ 100,000 ಯುವಾನ್ ಸಾಲ ಇರುವುದು ಪತ್ತೆಯಾಗಿದೆ. ತನಗೆ ಪಿತ್ತಜನಕಾಂಗದ ಸಮಸ್ಯೆ ಇರುವುದಾಗಿಯೂ ಯುವತಿಯೇ ಬಾಯ್ಬಿಟ್ಟಿದ್ದಾಳೆ. ಇದರಿಂದ ಬೇಸತ್ತ ಗು, ಸರಿಯಾಗಿ ವಿಚಾರಿಸದೆ ಇಂಥದ್ದೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು, ಮದುವೆಯಾದ ಕೇವಲ 9 ದಿನಗಳಲ್ಲೇ ವಿಚ್ಛೇದನ ಕೇಳಿದ್ದಾನೆ. 

ಮೊದಲು ಒಪ್ಪಿಕೊಂಡಿದ್ದ ಆಕೆ, ನಂತರ ಗು ವಿರುದ್ಧವೇ ಕೇಸ್ ಹಾಕಿದ್ದು, ಆತನ ನಿರ್ಧಾರದಿಂದ ತಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆರೋಪಿಸಿ 50,000 ಯುವಾನ್ (ಅಂದಾಜು 7 ಲಕ್ಷ ರೂ.) ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದಾಳೆ. ಇತ್ತ ವಂಚನೆಗೊಳಗಾದ ಗು, ತಾನು ಪಾವತಿಸಿದ 160,000 ಯುವಾನ್ ಶುಲ್ಕವನ್ನು ಹಿಂದಿರುಗಿಸುವಂತೆ ಮ್ಯಾಚ್‌ಮೇಕಿಂಗ್ ಏಜೆನ್ಸಿ ವಿರುದ್ಧವೂ ಪ್ರತ್ಯೇಕ ಮೊಕದ್ದಮೆ ಹೂಡಿದ್ದಾನೆ.

Leave a Reply

Your email address will not be published. Required fields are marked *

Advertisement


This will close in 3 seconds