ಯಲ್ಲಾಪುರ: ತಾಲೂಕಿನ ಶ್ರೀ ಕ್ಷೇತ್ರ ಕವಡಿಕೆರೆ ದೇವಸ್ಥಾನದ ಭಕ್ತರ ಬಹುದಿನಗಳ ನಿರೀಕ್ಷೆಯಾಗಿದ್ದ ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯ ಮೂಲಕ ಬುಧವಾರ ಚಾಲನೆ ನೀಡಲಾಯಿತು.
ದೇವಸ್ಥಾನದ ಪೌರಾಣಿಕ ಹಿನ್ನೆಲೆ ಹಾಗೂ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೈಗೆತ್ತಿಕೊಂಡಿರುವ ಈ ನಿರ್ಮಾಣ ಕಾರ್ಯವು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವ ಪಡೆದಿದೆ.
ಸ್ಕಂದ ಪುರಾಣದ ಇಡಗುಂದಿಯ ತೀರ್ಥಮಾಹಾತ್ಮ್ಯೆಯಲ್ಲಿ ಕ್ಷೇತ್ರದ ಕುರಿತು ಉಲ್ಲೇಖವಿದೆ. ದ್ವಾಪರಯುಗದಲ್ಲಿ ಪಾಂಡವರ ವನವಾಸದ ಸಂದರ್ಭದಲ್ಲಿ ದೇವಿಯ ಆದೇಶದಂತೆ ಕಾಶಿಯಿಂದ ಗಂಗೆಯನ್ನು ತಂದು ಸರೋವರ ನಿರ್ಮಿಸಿ, ಅದರ ತಟದಲ್ಲಿ ಭೀಮನು ಪ್ರತಿಷ್ಠಾಪನೆ ಮಾಡಿದನೆಂಬ ಪೌರಾಣಿಕ ಕಥನ ಇದರಲ್ಲಿ ಉಲ್ಲೇಖಿತವಾಗಿದೆ.
ಇತಿಹಾಸದ ದಾಖಲೆಗಳ ಪ್ರಕಾರ, 1594ರಲ್ಲಿ ಗೋವಿಂದ ಹೆಗಡೆಯವರು ದೇವಸ್ಥಾನ ಹಾಗೂ ಅದಕ್ಕೆ ಸಂಬಂಧಿಸಿದ ಜಮೀನನ್ನು ಪೂಜಾ ಕೈಂಕರ್ಯಗಳ ನಿರಂತರ ನಿರ್ವಹಣೆಗಾಗಿ ಸ್ವರ್ಣವಲ್ಲಿ ಮಠಕ್ಕೆ ವಹಿಸಿಕೊಟ್ಟಿದ್ದರು. ಸುಮಾರು 1925ರವರೆಗೆ ಮಠದ ಆಡಳಿತ ಮಂಡಳಿಯು ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸಿದ್ದು, ನಂತರ ಸ್ಥಳೀಯರಿಗೆ ಆಡಳಿತದ ಜವಾಬ್ದಾರಿ ವಹಿಸಲಾಯಿತು ಎಂದು ತಿಳಿದುಬರುತ್ತದೆ.
ದೇವಸ್ಥಾನದ ಪುರೋಹಿತರಾದ ಮಹಾಬಲೇಶ್ವರ ಭಟ್ಟ ಕಿರಕುಂಬತ್ತಿ ಅವರ ಪೌರೋಹಿತ್ಯದಲ್ಲಿ ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಟ್ಟಡ ಸಮಿತಿಯ ಉಪಾಧ್ಯಕ್ಷರು ಹಾಗೂ ದೇವಸ್ಥಾನದ ಮುಖ್ಯ ಅರ್ಚಕರಾದ ಗೋಪಾಲಕೃಷ್ಣ ವೆಂ. ಭಟ್ಟ ಮಾವಿನಕೊಡಿ ದಂಪತಿಗಳು ಯಜಮಾನಿಕೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷ ವಿಶ್ವನಾಥ ಎಂ. ಭಟ್ಟ (MKB), ಉಪಾಧ್ಯಕ್ಷ ನಾಗರಾಜ ಕವಡಿಕೇರಿ, ಕಾರ್ಯದರ್ಶಿ ರಾಮಕೃಷ್ಣ ಕವಡಿಕೇರಿ, ಸಹಕಾರ್ಯದರ್ಶಿ ರಾಮಚಂದ್ರ ಭಟ್ಟ ಸೇರಿದಂತೆ ಮೂವತ್ತಕ್ಕೂ ಅಧಿಕ ಸಮಿತಿ ಸದಸ್ಯರು ಹಾಗೂ ದೇವಸ್ಥಾನದ ಭಕ್ತರು ಉಪಸ್ಥಿತರಿದ್ದರು.
ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಸುಮಾರು 30 ಲಕ್ಷ ರೂ. ವೆಚ್ಚ ತಗುಲಬಹುದೆಂದು ಅಂದಾಹಿಸಲಾಗಿದೆ. ಮಹಾದ್ವಾರ ಪೂರ್ಣಗೊಂಡ ಬಳಿಕ ದೇವಸ್ಥಾನದ ಪ್ರವೇಶಕ್ಕೆ ವಿಶೇಷ ಮೆರುಗು ದೊರೆಯಲಿದ್ದು, ಕ್ಷೇತ್ರದ ಧಾರ್ಮಿಕ ಪರಂಪರೆಗೆ ಪೂರಕವಾದ ಅಭಿವೃದ್ಧಿ ಕಾರ್ಯವಾಗಿ ಇದು ಗಮನ ಸೆಳೆಯಲಿದೆ.












Leave a Reply