
ಯಲ್ಲಾಪುರ: ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಹಿಟ್ಟಿನಬೈಲ್ ಹಾಗೂ ಸುತ್ತಮುತ್ತಲಿನ ಸುಮಾರು 10 ಗ್ರಾಮಗಳ ಗ್ರಾಮಸ್ಥರು ಮಳೆಗಾಗಿ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಆಚರಣೆಯೊಂದನ್ನು ನಡೆಸಿದರು.
ಗ್ರಾಮದ ಹಿರಿಯರು ಹಾಗೂ ನಾಗರಿಕರ ಅನುಮತಿ ಮತ್ತು ಸಹಕಾರದೊಂದಿಗೆ ಅ.4ರಂದು ‘ಕಪ್ಪೆ ಮದುವೆ’ (ದಿಬ್ಬಣ) ಹಾಗೂ ದೆಂಡ್ಲಿ ಸುಗ್ಗಿ ಆಚರಣೆಯನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ಅಂದು ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮಸ್ಥರು ಉಪವಾಸವಿದ್ದು, ಕಪ್ಪೆಯನ್ನು ಮೆರವಣಿಗೆಯಲ್ಲಿ ಹೊತ್ತುಕೊಂಡು ಪ್ರತಿ ಊರಿಗೂ ತೆರಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಬರಿಗಾಲಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಕಪ್ಪೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಪೂಜೆ ನೆರವೇರಿಸಿದ ಕಪ್ಪೆಯನ್ನು ನೀರು ಇರುವ ಕೆರೆಗೆ ಕೊಂಡೊಯ್ದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.
ಮಳೆ ಸಮೃದ್ಧವಾಗಿ ಸುರಿದು, ಬರದ ಛಾಯೆ ದೂರವಾಗಿ, ರೈತರು ಬೆಳೆದ ಬೆಳೆಗಳು ಉತ್ತಮವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ವಿಶಿಷ್ಟ ಆಚರಣೆಯ ಮೂಲಕ ದೇವರಲ್ಲಿ ಪ್ರಾರ್ಥಿಸಿದರು.
ಹಳೆಯ ಕಾಲದಿಂದಲೂ ಗ್ರಾಮೀಣ ಭಾಗದಲ್ಲಿ ಮಳೆಗಾಗಿ ವಿವಿಧ ರೀತಿಯ ಸಂಪ್ರದಾಯಗಳು ನಡೆದುಕೊಂಡು ಬಂದಿದ್ದು, ಅವುಗಳಲ್ಲಿ ಕಪ್ಪೆ ಮದುವೆಯೂ ಒಂದು. ಆಧುನಿಕ ಕಾಲದಲ್ಲಿಯೂ ಗ್ರಾಮಸ್ಥರು ತಮ್ಮ ಹಿರಿಯರಿಂದ ನಡೆದುಕೊಂಡು ಬಂದ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.
ಈ ವಿಶಿಷ್ಟ ಆಚರಣೆಯಲ್ಲಿ ಹಿಟ್ಟಿನಬೈಲ್ ಸೇರಿದಂತೆ ಸುತ್ತಮುತ್ತಲಿನ 10 ಗ್ರಾಮಗಳ ಹಿರಿಯರು, ಮಹಿಳೆಯರು, ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.













Leave a Reply