ಬಾಹ್ಯಾಕಾಶ ಮತ್ತು ಕ್ರೀಡಾ ಜಗತ್ತಿನಲ್ಲಿ ಭಾರತದ ಹೆಜ್ಜೆಗಳು ಜೋರಾಗುತ್ತಿರುವ ಬೆನ್ನಲ್ಲೇ, ಕ್ರಿಕೆಟ್ ಪ್ರೇಮಿಗಳಿಗೆ ಜಾಗತಿಕ ಮಟ್ಟದ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. 2028ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ನ ಐತಿಹಾಸಿಕ ಪುನರಾಗಮನದ ಅರ್ಹತಾ ನಿಯಮಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಜಂಟಿಯಾಗಿ ಅಧಿಕೃತಗೊಳಿಸಿವೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ತಂಡಗಳು ಟಿ20 ಮಾದರಿಯಲ್ಲಿ ಸ್ಪರ್ಧಿಸಲಿದ್ದು, ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಓಷೇನಿಯಾ ಖಂಡಗಳಿಗೆ ಕಡ್ಡಾಯ ಪ್ರಾತಿನಿಧ್ಯವನ್ನು ಖಾತರಿಪಡಿಸಲಾಗಿದೆ. ಈ ಐತಿಹಾಸಿಕ ರೇಸ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದೆ.

ಭಾರತ ಮಹಿಳಾ ತಂಡಕ್ಕೆ ನೇರ ಟಿಕೆಟ್: ಪುರುಷರ ತಂಡಕ್ಕೆ ಕಾಯುವಿಕೆ
ಪ್ರಸುತ್ತ ನಡೆಯುತ್ತಿರುವ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪ್ರದರ್ಶನದ ಆಧಾರದ ಮೇಲೆ ಭಾರತದ ಮಹಿಳಾ ತಂಡ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಏಷ್ಯಾ ಖಂಡದಿಂದ ಅತ್ಯುನ್ನತ ಸ್ಥಾನ ಪಡೆದ ಅರ್ಹ ತಂಡವಾಗಿ ಭಾರತ ಹೊರಹೊಮ್ಮಿದ್ದು, ಇದರೊಂದಿಗೆ ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಹ ತಮ್ಮ ತಮ್ಮ ಖಂಡಗಳ ಪ್ರತಿನಿಧಿಯಾಗಿ ಒಲಿಂಪಿಕ್ಸ್ ಟಿಕೆಟ್ ಖಚಿತಪಡಿಸಿಕೊಂಡಿವೆ.
ಆದರೆ, ಭಾರತದ ಪುರುಷರ ಕ್ರಿಕೆಟ್ ತಂಡವು ಅಧಿಕೃತವಾಗಿ ಅರ್ಹತೆ ಪಡೆಯಲು 2026ರ ಡಿಸೆಂಬರ್ 31ರವರೆಗೂ ಕಾಯಬೇಕಾಗಿದೆ. ಅಂದಿನ ಐಸಿಸಿ ಟಿ20 ಶ್ರೇಯಾಂಕದ (Rankings) ಆಧಾರದ ಮೇಲೆ ಏಷ್ಯಾ ಖಂಡದ ಅಗ್ರಸ್ಥಾನಿ ತಂಡವಾಗಿ ಭಾರತ ಪುರುಷರ ತಂಡ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಸಂಪೂರ್ಣ ಅವಕಾಶಗಳಿವೆ. ಒಟ್ಟು ಆರು ತಂಡಗಳ ಪೈಕಿ ಐದು ತಂಡಗಳು ಶ್ರೇಯಾಂಕ ಹಾಗೂ ವಿಶ್ವಕಪ್ ಪ್ರದರ್ಶನದಿಂದ ಆಯ್ಕೆಯಾದರೆ, ಕೊನೆಯ ಆರನೇ ಸ್ಥಾನಕ್ಕಾಗಿ 2027ರಲ್ಲಿ ವಿಶೇಷ ‘ಐಸಿಸಿ ಒಲಿಂಪಿಕ್ಸ್ ಕ್ವಾಲಿಫೈಯರ್’ ಪಂದ್ಯಾವಳಿ ನಡೆಯಲಿದೆ.
ಆತಿಥೇಯ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಭವಿಷ್ಯ
ಆತಿಥೇಯ ದೇಶವಾಗಿರುವ ಕಾರಣ ಅಮೆರಿಕಾ (USA) ಪುರುಷರ ಮತ್ತು ಮಹಿಳಾ ತಂಡಗಳು ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು ಜೂನ್ 30ರಿಂದ ಡಿಸೆಂಬರ್ 31ರ ಒಳಗಿನ ಅವಧಿಯಲ್ಲಿ ಐಸಿಸಿ ಟಿ20 ಶ್ರೇಯಾಂಕದ ಅಗ್ರ 15ರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಅಮೆರಿಕಾ ಈ ಮಾನದಂಡದಲ್ಲಿ ವಿಫಲವಾದರೆ ಆ ಸ್ಥಾನವನ್ನು ಅಗ್ರ ಶ್ರೇಯಾಂಕದ ಬೇರೆ ದೇಶಕ್ಕೆ ನೀಡಲಾಗುತ್ತದೆ.
ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡವು ಒಲಿಂಪಿಕ್ ಸಮಿತಿಯಿಂದ ಪ್ರತ್ಯೇಕ ರಾಷ್ಟ್ರವಾಗಿ ಗುರುತಿಸಲ್ಪಡದ ಕಾರಣ ಒಲಿಂಪಿಕ್ಸ್‌ನಲ್ಲಿ ನೇರವಾಗಿ ಭಾಗವಹಿಸಲು ಅರ್ಹತೆ ಹೊಂದಿಲ್ಲ. ಆದರೆ ಅವರು ಅಗ್ರ 8ರ ಶ್ರೇಯಾಂಕದಲ್ಲಿದ್ದರೆ, ಕೆರಿಬಿಯನ್ ವಲಯದ ದೇಶಗಳ ನಡುವೆ ಪ್ರತ್ಯೇಕ ಪಂದ್ಯಾವಳಿ ನಡೆಸಿ ವಿಜೇತರಾಗುವ ಒಂದು ದೇಶಕ್ಕೆ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಆಡಲು ಅವಕಾಶ ನೀಡಲಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ತಲಾ 15 ಆಟಗಾರರ ತಂಡಗಳು ಮೂರರ ಗುಂಪುಗಳಲ್ಲಿ ಸ್ಪರ್ಧಿಸಲಿದ್ದು, ಪೊಮೊನಾದಲ್ಲಿರುವ ವಿಶೇಷ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಟ್ಟು 28 ಪಂದ್ಯಗಳು ಜರುಗಲಿವೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.


Leave a Reply