ಕಳಪೆ ಕಾಮಗಾರಿ ನಡೆಸಿದರೆ ಕಠಿಣ ಕ್ರಮ .. !!!!

ಹಂಚಿಕೊಳ್ಳಿ

ಕಾರವಾರ:ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಸರಕಾರದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತಿವೆಯೇ? ಟಾಸ್ಕ್ ಫೋರ್ಸ್ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಗೆ ಉತ್ತರವಾಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಡಾ. ದಿಲೀಷ್ ಶಶಿ ಅವರು ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯ ಜಾಲಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಸೋಮವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಅವರು ಕೈಗೊಂಡ ನಿರ್ಧಾರಗಳು ಜಿಲ್ಲೆಯ ಆಡಳಿತ ಯಂತ್ರದಲ್ಲಿ ಸಂಚಲನ ಮೂಡಿಸಿವೆ.ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲಿದೆಯೇ ಜಿಪಿಎಸ್ ತಂತ್ರಜ್ಞಾನ?ಅಧಿಕಾರಶಾಹಿ ಮತ್ತು ಗುತ್ತಿಗೆದಾರರ ಸಾಡಗಂಟಿನಿಂದಾಗಿ ಹಲವು ಕಾಮಗಾರಿಗಳು ಕಳಪೆಯಾಗುತ್ತಿವೆ ಎಂಬ ಸಾರ್ವಜನಿಕ ದೂರುಗಳಿಗೆ ಈ ಬಾರಿ ಸಿಇಒ ತಾಂತ್ರಿಕ ಕಣ್ಗಾವಲಿನ ಅಸ್ತ್ರ ಹೂಡಿದ್ದಾರೆ. ಇನ್ನು ಮುಂದೆ ಯಾವುದೇ ಕಾಮಗಾರಿಯ ಬಿಲ್ ಪಾಸ್ ಆಗಬೇಕಾದರೆ ಜಿಪಿಎಸ್ (GPS) ಆಧಾರಿತ ಫೋಟೋ ಮತ್ತು ನಿಖರ ದಾಖಲೆಗಳು ಕಡ್ಡಾಯ. ಅಂದರೆ, ಕಾಗದದ ಮೇಲೆ ಕಾಮಗಾರಿ ಮುಗಿಸಿ ಬಿಲ್ ಎತ್ತುವ ಹಳೇ ಆಟ ಇನ್ನು ಮುಂದೆ ನಡೆಯುವುದಿಲ್ಲ. ತಳಮಟ್ಟದಲ್ಲಿ ಕೆಲಸ ನಡೆದಿದ್ದರೆ ಮಾತ್ರವೇ ಹಣ ಬಿಡುಗಡೆಯಾಗಲಿದೆ. ಈ ಕಠಿಣ ನಿಯಮದಿಂದಾಗಿ ಇಲಾಖೆಯಲ್ಲಿ ಪಾರದರ್ಶಕತೆ ಬರಲಿದೆಯೇ ಮತ್ತು ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.ಅಧಿಕಾರಿಗಳ ಹೊಣೆಗಾರಿಕೆ ಮತ್ತು ಕಠಿಣ ಎಚ್ಚರಿಕೆ:ಇಷ್ಟು ದಿನ ಕಳಪೆ ಕಾಮಗಾರಿಗಳಾದಾಗ ಕೇವಲ ಗುತ್ತಿಗೆದಾರರನ್ನು ದೂಷಿಸಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಸಿಇಒ ನೇರವಾಗಿ ಇಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಕಾಮಗಾರಿ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳ ವಿರುದ್ಧವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದು, ಕೆಳಹಂತದ ಇಂಜಿನಿಯರ್‌ಗಳಲ್ಲಿ ನಡುಕ ಹುಟ್ಟಿಸಿದೆ. ಇದು ಅಧಿಕಾರಿಗಳು ಕಚೇರಿ ಬಿಟ್ಟು ಫೀಲ್ಡ್‌ಗೆ ಇಳಿದು ಕೆಲಸ ಪರಿಶೀಲಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.ನೆನೆಗುದಿಗೆ ಬಿದ್ದ ಯೋಜನೆಗಳು: ಹಠಾತ್ ಜಾಗೃತಿಯೇ?ಜಿಲ್ಲೆಯ ಹಲವೆಡೆ ಕೊಳವೆ ಬಾವಿಗಳನ್ನು ಕೊರೆದು ವರ್ಷಗಳೇ ಕಳೆದರೂ ಜನರಿಗೆ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ವಿದ್ಯುತ್ ಸಂಪರ್ಕ ಹಾಗೂ ಪಂಪ್‌ಸೆಟ್ ಅಳವಡಿಕೆಯಲ್ಲಿ ಆಗುತ್ತಿರುವ ವಿಳಂಬ ನೀತಿ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ. ಇದೀಗ ಸಿಇಒ ಅವರು ಕೊಳವೆ ಬಾವಿ ಕೊರೆದ ತಕ್ಷಣವೇ ವಿದ್ಯುತ್ ಸಂಪರ್ಕ ನೀಡಲು ಆದೇಶಿಸಿರುವುದು ಸ್ವಾಗತಾರ್ಹ. ಇದರ ಜೊತೆಗೆ, ಜಿಲ್ಲಾದ್ಯಂತ ಹಳ್ಳ ಹಿಡಿದಿರುವ ಶುದ್ಧ ಕುಡಿಯುವ ನೀರಿನ ಘಟಕಗಳ (RO Plants) ದುರಸ್ತಿ ಕಾರ್ಯವೂ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಕೇವಲ ಸಭೆಯ ಆದೇಶಗಳು ಕಡತಗಳಿಗೆ ಸೀಮಿತವಾಗದೆ, ಅಧಿಕಾರಿಗಳು ಇದನ್ನು ಜವಾಬ್ದಾರಿಯಿಂದ ಜಾರಿಗೊಳಿಸಿದರೆ ಮಾತ್ರ ಕಾರವಾರದ ಗ್ರಾಮೀಣ ಭಾಗದ ನೀರಿನ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಗಲಿದೆ.

Leave a Reply

Your email address will not be published. Required fields are marked *