ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಮುಗಿಬಿದ್ದ 20 ಬೀದಿ ನಾಯಿಗಳ ಹಿಂಡು!

ಹಂಚಿಕೊಳ್ಳಿ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮನೆಯ ಹೊರಗೆ ಆಟವಾಡುತ್ತಿದ್ದ ಐದು ವರ್ಷದ ಮುಗ್ಧ ಬಾಲಕನ ಮೇಲೆ ಬರೋಬ್ಬರಿ 20 ನಾಯಿಗಳ ಹಿಂಡು ಭೀಕರವಾಗಿ ದಾಳಿ ನಡೆಸಿರುವ ಘಟನೆ ನಡೆದಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಜೋಗಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ಈ ಮಗುವಿನ ಪೋಷಕರು ಹೊರ ರಾಜ್ಯದಿಂದ ಇಲ್ಲಿಗೆ ಕೂಲಿ ಕೆಲಸಕ್ಕಾಗಿ ವಲಸೆ ಬಂದಿದ್ದಾರೆ. ಇಂದು ಮುಂಜಾನೆ ಎಂದಿನಂತೆ ಮಗುವಿನ ತಾಯಿ ಕೆಲಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮನೆಯ ಹೊರಗಡೆ ಮಗು ಒಂಟಿಯಾಗಿ ಆಟವಾಡುತ್ತಿತ್ತು. ಇದನ್ನು ಗಮನಿಸಿದ ಬೀದಿ ನಾಯಿಗಳ ಹಿಂಡು ಏಕಾಏಕಿ ಮಗುವಿನ ಮೇಲೆ ಮುಗಿಬಿದ್ದಿದೆ.

ಬರೋಬ್ಬರಿ 20ಕ್ಕೂ ಹೆಚ್ಚು ನಾಯಿಗಳು ಒಟ್ಟಾಗಿ ಮಗುವನ್ನು ಸುತ್ತುವರೆದು ಕಚ್ಚಿ ಎಳೆಯಲಾರಂಭಿಸಿವೆ. ನಾಯಿಗಳ ದಾಳಿಯಿಂದಾಗಿ ಮಗುವಿನ ಕುತ್ತಿಗೆ ಹಾಗೂ ಕಿವಿಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಮಗುವಿನ ಕಿರುಚಾಟ ಕೇಳಿ ತಕ್ಷಣವೇ ಧಾವಿಸಿದ ಸ್ಥಳೀಯರು, ನಾಯಿಗಳನ್ನು ಓಡಿಸಿ ಮಗುವನ್ನು ಅತ್ಯಂತ ಸಕಾಲದಲ್ಲಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಮಗುವನ್ನು ಸ್ಥಳೀಯರೇ ತಕ್ಷಣವೇ ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಸದ್ಯ ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದರೂ ಸ್ಥಳೀಯ ಸಂಸ್ಥೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds