French Open 2026: ಮಹಿಳಾ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡ 19ರ ಹರೆಯದ ಮಿರಾ ಆಂಡ್ರೀವಾ!

ಹಂಚಿಕೊಳ್ಳಿ

ಪ್ಯಾರಿಸ್: ಕ್ಲೇ ಕೋರ್ಟ್‌ನಲ್ಲಿ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 2026 ರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಷ್ಯಾದ 19 ವರ್ಷದ ಉದಯೋನ್ಮುಖ ಆಟಗಾರ್ತಿ ಮಿರಾ ಆಂಡ್ರೀವಾ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಜೂನ್ 6 ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಂಡ್ರೀವಾ ತಮ್ಮ ವೃತ್ತಿಬದುಕಿನ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ 5 ಗೇಮ್‌ಗಳಲ್ಲಿ ಚ್ವಾಲಿನ್ಸ್ಕಾ 3-2 ರ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಆ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ 8 ನೇ ಶ್ರೇಯಾಂಕಿತೆ ಆಂಡ್ರೀವಾ, ಸತತ 9 ಗೇಮ್‌ಗಳನ್ನು ಗೆಲ್ಲುವ ಮೂಲಕ ಎದುರಾಳಿಗೆ ದಿಕ್ಕುತೋಚದಂತೆ ಮಾಡಿದರು. ಈ ಮೂಲಕ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ 5-0 ರ ಭಾರಿ ಮುನ್ನಡೆ ಪಡೆದ ಆಂಡ್ರೀವಾ, ಅಂತಿಮವಾಗಿ ಎದುರಾಳಿಯ ಸರ್ವ್ ಅನ್ನು ಬ್ರೇಕ್ ಮಾಡಿ 6-2 ಅಂತರದಿಂದ ದ್ವಿತೀಯ ಸೆಟ್ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಮಿರಾ ಆಂಡ್ರೀವಾ ಸಾಧನೆ:

19 ವರ್ಷದ ಮಿರಾ ಆಂಡ್ರೀವಾ, 1992 ರಲ್ಲಿ ಮೋನಿಕಾ ಸೆಲೆಸ್ (18 ವರ್ಷ) ಪ್ರಶಸ್ತಿ ಗೆದ್ದ ನಂತರ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಚಾಂಪಿಯನ್ ಕಾನ್ಚಿತಾ ಮಾರ್ಟಿನೆಜ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಆಂಡ್ರೀವಾ, ಈ ಗೆಲುವಿನೊಂದಿಗೆ ಡಬ್ಲ್ಯೂಟಿಎ (WTA) ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಮಾಯಾ ಚ್ವಾಲಿನ್ಸ್ಕಾ ಸಾಧನೆ:

ಫೈನಲ್ ಪಂದ್ಯದಲ್ಲಿ ಸೋತರೂ ಸಹ, ವಿಶ್ವ ರ್ಯಾಂಕಿಂಗ್‌ನಲ್ಲಿ 114 ನೇ ಸ್ಥಾನದಲ್ಲಿದ್ದ ಪೋಲೆಂಡ್‌ನ 24 ವರ್ಷದ ಮಾಯಾ ಚ್ವಾಲಿನ್ಸ್ಕಾ ಕ್ವಾಲಿಫೈಯರ್ ಹಂತದಿಂದ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಈ ರನ್ನರ್-ಅಪ್ ಪ್ರಶಸ್ತಿಯೊಂದಿಗೆ ಮಾಯಾ ಚ್ವಾಲಿನ್ಸ್ಕಾ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ 21 ನೇ ಸ್ಥಾನಕ್ಕೆ ಭಾರಿ ಬಡ್ತಿ ಪಡೆದಿದ್ದಾರೆ.

ಇಂದು ಪುರುಷರ ಸಿಂಗಲ್ಸ್ ಫೈನಲ್:

ಫ್ರೆಂಚ್ ಓಪನ್ 2026 ರ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವು ಇಂದು (ಭಾನುವಾರ, ಜೂನ್ 7) ನಡೆಯಲಿದೆ. ಈ ಬಹುನಿರೀಕ್ಷಿತ ಅಂತಿಮ ಹಣಾಹಣಿಯಲ್ಲಿ ಜರ್ಮನಿಯ ಸ್ಟಾರ್ ಆಟಗಾರ ಅಲೆಕ್ಸಾಂಡರ್ ಝ್ವೇರೆಫ್ (Alexander Zverev) ಮತ್ತು ಇಟಲಿಯ ಯುವ ಆಟಗಾರ ಫ್ಲೇವಿಯೊ ಕೊಬೊಲ್ಲಿ (Flavio Cobolli) ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds